ಇಂದಿನ ದಿನಗಳಲ್ಲಿ ಮಾಂಸಾಹಾರಿಗಳ ಸಂಖ್ಯೆ ಹೆಚ್ಚುತ್ತಿದೆ, ಅದರಲ್ಲೂ ಕಡಿಮೆ ಬೆಲೆಗೆ ಮತ್ತು ಸುಲಭವಾಗಿ ಲಭ್ಯವಿರುವ ಬ್ರಾಯ್ಲರ್ ಚಿಕನ್ ಅತಿ ಹೆಚ್ಚು ಬಳಕೆಯಾಗುತ್ತಿದೆ. ಆದರೆ, ನೀವು ಬ್ರಾಯ್ಲರ್ ಕೋಳಿಯ ಮೂಳೆಯನ್ನು ಕಚ್ಚಿ ತಿನ್ನುವ ಅಥವಾ ಅದರೊಳಗಿನ ಮಜ್ಜೆಯನ್ನು (Marrow) ಹೀರುವ ಅಭ್ಯಾಸ ಹೊಂದಿದ್ದೀರಾ? ಹಾಗಿದ್ದರೆ ಈ ವರದಿ ನಿಮಗಾಗಿ.
ಬ್ರಾಯ್ಲರ್ ಕೋಳಿಗಳ ಬೆಳವಣಿಗೆಯ ಹಿಂದಿನ ಕರಾಳ ಸತ್ಯ
ಪೌಲ್ಟ್ರಿ ಫಾರಂಗಳಲ್ಲಿ ಕೋಳಿಗಳು ಅತಿ ವೇಗವಾಗಿ ಬೆಳೆಯಲು ಮತ್ತು ಹೆಚ್ಚಿನ ತೂಕ ಬರಲು ಅನೇಕ ಅಸ್ವಾಭಾವಿಕ ಪದ್ಧತಿಗಳನ್ನು ಬಳಸಲಾಗುತ್ತದೆ. ಇವುಗಳಿಗೆ ಹಾರ್ಮೋನ್ ಇಂಜೆಕ್ಷನ್ಗಳು, ರಾಸಾಯನಿಕಯುಕ್ತ ಆಹಾರ ಮತ್ತು ಹೆಚ್ಚಿನ ಪ್ರಮಾಣದ ಆಂಟಿಬಯೋಟಿಕ್ಗಳನ್ನು ನೀಡಲಾಗುತ್ತದೆ. ಈ ಹಾನಿಕಾರಕ ರಾಸಾಯನಿಕಗಳ ಪ್ರಭಾವವು ಕೋಳಿಯ ಮಾಂಸಕ್ಕಿಂತ ಹೆಚ್ಚಾಗಿ ಅದರ ಮೂಳೆಗಳಲ್ಲಿ ಸಂಗ್ರಹವಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮೂಳೆ ಮಜ್ಜೆ: ಯಾವುದು ವರ? ಯಾವುದು ಶಾಪ?
ಸಾಮಾನ್ಯವಾಗಿ ಪ್ರಾಣಿಗಳ ಮೂಳೆಯೊಳಗೆ ಇರುವ ಮಜ್ಜೆಯು ಪೌಷ್ಟಿಕಾಂಶಗಳಿಂದ ಕೂಡಿರುತ್ತದೆ.
ಕುರಿ ಅಥವಾ ಆಡು: ಅಪಘಾತದಲ್ಲಿ ಮೂಳೆ ಮುರಿತಕ್ಕೊಳಗಾದವರಿಗೆ ವೈದ್ಯರು ಕುರಿ ಮೂಳೆಯ ಸೂಪ್ ಕುಡಿಯಲು ಸಲಹೆ ನೀಡುತ್ತಾರೆ. ಇದರಲ್ಲಿರುವ ಕೊಲಾಜೆನ್ ಮತ್ತು ಖನಿಜಗಳು ಮೂಳೆಗಳು ಬೇಗನೆ ಕೂಡಿಕೊಳ್ಳಲು ಸಹಾಯ ಮಾಡುತ್ತವೆ.
ನಾಟಿ ಕೋಳಿ: ನೈಸರ್ಗಿಕವಾಗಿ ಬೆಳೆಯುವ ನಾಟಿ ಕೋಳಿಯ ಮೂಳೆ ಮಜ್ಜೆಯಲ್ಲಿ ಕೊಲಾಜೆನ್, ಗ್ಲೈಸಿನ್ ಮತ್ತು ಗ್ಲುಕೋಸಮೈನ್ ಸಮೃದ್ಧವಾಗಿರುತ್ತದೆ. ಇದು ಕೀಲು ನೋವು ನಿವಾರಿಸಲು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ.
ಆದರೆ ಬ್ರಾಯ್ಲರ್ ಕೋಳಿಗಳ ವಿಷಯದಲ್ಲಿ ಇದು ಉಲ್ಟಾ ಆಗುತ್ತದೆ. ಇವುಗಳಿಗೆ ನೀಡುವ ರಾಸಾಯನಿಕಗಳು ನೇರವಾಗಿ ಮೂಳೆ ಮಜ್ಜೆಯನ್ನು ಸೇರುವುದರಿಂದ, ಇದನ್ನು ಸೇವಿಸುವುದು ಆರೋಗ್ಯಕ್ಕೆ ಯಮ ಕಂಟಕವಾಗಬಹುದು.
ಆರೋಗ್ಯದ ಮೇಲೆ ಬೀರುವ ಪರಿಣಾಮಗಳು
ಬ್ರಾಯ್ಲರ್ ಕೋಳಿಯ ಮೂಳೆಯನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ರಾಸಾಯನಿಕ ಅಂಶಗಳು ಸೇರಿ ಈ ಕೆಳಗಿನ ಸಮಸ್ಯೆಗಳು ಉಂಟಾಗಬಹುದು:
ರೋಗನಿರೋಧಕ ಶಕ್ತಿ ಕುಸಿತ: ಆಂಟಿಬಯೋಟಿಕ್ಗಳ ಅತಿಯಾದ ಬಳಕೆಯಿಂದ ಮನುಷ್ಯರ ದೇಹದ ಮೇಲೆ ಸಾಮಾನ್ಯ ಔಷಧಿಗಳು ಕೆಲಸ ಮಾಡದಂತಾಗಬಹುದು.
ಹಾರ್ಮೋನ್ ವ್ಯತ್ಯಯ: ಕೋಳಿಗಳಿಗೆ ನೀಡುವ ಹಾರ್ಮೋನ್ಗಳು ಮಾನವರಲ್ಲಿ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತವೆ.
ಜೀರ್ಣಕ್ರಿಯೆ ಸಮಸ್ಯೆ: ರಾಸಾಯನಿಕಯುಕ್ತ ಮಜ್ಜೆಯು ಜೀರ್ಣಾಂಗ ವ್ಯೂಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ತಜ್ಞರ ಸಲಹೆ: ಮಾಂಸ ಸೇವನೆಯಲ್ಲಿ ಮಿತಿಯಿರಲಿ. ಸಾಧ್ಯವಾದಷ್ಟು ನಾಟಿ ಕೋಳಿಯನ್ನು ಬಳಸಿ. ಬ್ರಾಯ್ಲರ್ ಕೋಳಿ ತಿನ್ನುವಾಗ ಅದರ ಮೂಳೆಗಳನ್ನು ಕಚ್ಚಿ ತಿನ್ನುವ ಅಥವಾ ಮಜ್ಜೆಯನ್ನು ಸೇವಿಸುವ ಸಾಹಸಕ್ಕೆ ಹೋಗಬೇಡಿ.








