ಬೆಂಗಳೂರು : ಕೆಎಸ್‌ಆರ್‌ಟಿಸಿ 45 ಸಾಮಾನ್ಯ ಹಾಗೂ 70 ಪಲ್ಲಕ್ಕಿ ಸ್ಲೀಪರ್ ಬಸ್‌ಗಳು ಸೇರಿದಂತೆ ಒಟ್ಟು 115 ನೂತನ ಬಸ್‌ಗಳಿಗೆ ಸಚಿವ ರಾಮಲಿಂಗರೆಡ್ಡಿ ಹಸಿರು ನಿಶಾನೆ ತೋರಿಸಿದ್ದು, ಈ ಹೊಸ ಬಸ್‌ಗಳು ಬೆಂಗಳೂರಿನಿಂದ ರಾಜ್ಯದ ಹಲವು ಪ್ರಮುಖ ಮಾರ್ಗಗಳಿಗೆ ಸಂಚಾರ ನಡೆಸಲಿವೆ.
ಈ ಹಂತದಲ್ಲಿ ಒಟ್ಟು 115 ಬಸ್‌ಗಳನ್ನು ಸೇವೆಗೆ ಸೇರಿಸಲಾಗಿದೆ, ಅದರಲ್ಲಿ 45 ಸಾಮಾನ್ಯ ಬಸ್‌ಗಳು ಮತ್ತು 70 ಪಲ್ಲಕ್ಕಿ (ಸ್ಲೀಪರ್) ಬಸ್‌ಗಳು ಸೇರಿವೆ. ವಿಶೇಷವಾಗಿ ದೀರ್ಘ ದೂರ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳೊಂದಿಗೆ ಈ ಪಲ್ಲಕ್ಕಿ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ನೂತನ ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವಿನ್ಯಾಸ ಮಾಡಲಾಗಿದೆ.
ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸುಮಾರು 1.04 ಲಕ್ಷ ಸಿಬ್ಬಂದಿಗಳಿದ್ದು, ಇವರಲ್ಲಿ 8,956 ಮಹಿಳಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ 3167 ನಿರ್ವಾಹಕರು, 2254-ತಾಂತ್ರಿಕ ಸಿಬ್ಬಂದಿಗಳು, 3535 – ಆಡಳಿತ ಸಿಬ್ಬಂದಿಗಳಾಗಿರುತ್ತಾರೆ. ನಿಗಮದ 17 ವಿಭಾಗಗಳಿಂದ ತಲಾ ಒಬ್ಬರಂತೆ ಉತ್ತಮ ಕಾರ್ಯ ಸಾಧನೆ ತೋರಿದ, ತಾಂತ್ರಿಕ ಸಿಬ್ಬಂದಿ-19, ನಿರ್ವಾಹಕರು-15, ಹಾಗೂ ಕರಾಸಾ ಪೇದೆ-12, ಒಟ್ಟು 46 ಮಹಿಳಾ ಸಿಬ್ಬಂದಿಗಳನ್ನು ಪ್ರಶಸ್ತಿಯನ್ನು ಸ್ವೀಕರಿಸಿದರು.
ಹೊಸ ಬಸ್‌ಗಳು ಎಲ್ಲಿಂದ ಎಲ್ಲಿಗೆ ಸಂಚಾರ?
ಪಲ್ಲಕ್ಕಿ ನಾನ್ ಎಸಿ ಬಸ್‌ಗಳು ಉಡುಪಿ, ಮಂಗಳೂರು, ಮೈಸೂರು, ಧರ್ಮಸ್ಥಳ, ಶೃಂಗೇರಿ, ಹೊರನಾಡು, ಆಗುಂಬೆ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಂಪಿ, ರಾಯಚೂರು, ಜಮಖಂಡಿ, ಪುತ್ತೂರು, ಕಾಣಿಯೂರು, ಕುಕ್ಕೆ ಸುಬ್ರಹ್ಮಣ್ಯ, ಕಾಸರಗೋಡು, ಮಂತ್ರಾಲಯ, ತಿರುಚಿ, ಕೊಜಿಕ್ಕೋಡ್, ಮುನ್ನಾರ್, ಪಾಂಡಿಚೇರಿ, ತಂಜಾವೂರು, ಕೊಟ್ಟಾಯಂ, ಹೈದಾರಬಾದ್, ಚೆನ್ನೈ, ಪಣಜಿ, ಮಧುರೈ, ಕುಂಭಕೋಣಂ, ಎರ್ನಾಕುಲಂಗೆ ಕಾರ್ಯಾಚರಣೆ ಮಾಡಲಾಗುತ್ತದೆ.








