ಶಿವಮೊಗ್ಗ: ನಮ್ಮ ಸಮಾಜದಲ್ಲಿ ಮನುಷ್ಯ ಬದುಕಿರುವಾಗ ಬೇಕಾಗುವ ಗೌರವಕ್ಕಿಂತ, ಅವನ ಸಾವಿನ ನಂತರ ತೋರಿಸುವ ಅನುಕಂಪವೇ ಹೆಚ್ಚು ಎಂಬ ಮಾತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಗೌಟೂರು ಗ್ರಾಮದ ಜರೀನಾ ಬೇಗಂ ಎಂಬ ಮಹಿಳೆಯ ಬದುಕು ಇಂದು ವ್ಯವಸ್ಥೆಯ ನಿರ್ಲಕ್ಷ್ಯದ ನಡುವೆ ಹೋರಾಡುತ್ತಿದೆ. ಎರಡು ವರ್ಷಗಳಿಂದ ದೇಹವನ್ನು ಕೊರೆಯುತ್ತಿರುವ ಕ್ಯಾನ್ಸರ್ ಒಂದು ಕಡೆಯಾದರೆ, ಸಕಾಲಕ್ಕೆ ಸಿಗದ ಪಡಿತರ ಚೀಟಿಗಾಗಿ ಅಧಿಕಾರಿಗಳ ದಬಾರಿ ಕಚೇರಿಗಳ ನಡುವೆ ಅಲೆದಾಡುತ್ತಿರುವ ಮಾನಸಿಕ ನೋವು ಮತ್ತೊಂದು ಕಡೆ. ಆ ಕ್ಯಾನ್ಸರ್ ಪೀಡಿತ ಜರೀನಾ ಬೇಗಂ ಎಂಬ ಸಂತ್ರಸ್ತೆಯ ಹೋರಾಟದ ಕಣ್ಣೀರಿನ ಕತೆಯು ಮುಂದಿದೆ ಓದಿ..
ಹಸನ್ಮುಖಿ ಬದುಕಿಗೆ ಕಹಿಯಾದ ಕಾಯಿಲೆ
ಯಾವಾಗಲೂ ಹಸನ್ಮುಖಿಯಾಗಿ, ನೆರೆಹೊರೆಯವರ ಜೊತೆ ನಗುನಗುತ್ತಾ ಮಾತನಾಡುತ್ತಾ, ಅಡುಗೆ ಕೆಲಸ ಹಾಗೂ ಕೂಲಿ ಮಾಡುತ್ತಾ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದವರು ರಿಪ್ಪನ್ ಪೇಟೆಯ ಗೌಟೂರಿನ ಜರೀನಾ ಬೇಗಂ. ಆದರೆ ಎರಡು ವರ್ಷಗಳ ಹಿಂದೆ ವಕ್ಕರಿಸಿದ ಕ್ಯಾನ್ಸರ್ ಇಡೀ ಬದುಕನ್ನೇ ತಲೆಕೆಳಗು ಮಾಡಿತು. ದುಡಿಮೆ ನಿಂತಿತು, ಚಿಕಿತ್ಸೆಯ ವೆಚ್ಚ ಬೆಟ್ಟದಂತೆ ಬೆಳೆಯಿತು. ಇಂತಹ ಸಮಯದಲ್ಲಿ ನೆರವಿಗೆ ಬರಬೇಕಾದ ಸರ್ಕಾರಿ ಯೋಜನೆಗಳು ತಾಂತ್ರಿಕ ಕಾರಣಗಳ ನೆಪದಲ್ಲಿ ಅವರನ್ನೇ ಸತಾಯಿಸುತ್ತಿವೆ.
ಪಡಿತರ ಚೀಟಿ: ಬದುಕುವ ಹಕ್ಕಿಗಾಗಿ ಹೋರಾಟ
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಅಥವಾ ಸರ್ಕಾರದ ಉಚಿತ ವೈದ್ಯಕೀಯ ಸೌಲಭ್ಯ ಪಡೆಯಲು ಇಂದು ಬಿಪಿಎಲ್ ಪಡಿತರ ಚೀಟಿ ಅನಿವಾರ್ಯ. ಜರೀನಾ ಬೇಗಂ ಅವರ ಬಳಿ ಈ ಹಿಂದೆ ಕಾರ್ಡ್ ಇತ್ತಾದರೂ, ಅದರಲ್ಲಿ ಮಗ ಮತ್ತು ಸೊಸೆಯ ಹೆಸರುಗಳಿದ್ದವು. ಕುಟುಂಬದ ಬದಲಾದ ಸ್ಥಿತಿಯಿಂದಾಗಿ ಕೇವಲ ತಮ್ಮ ಮತ್ತು ಮಗಳ ಹೆಸರನ್ನು ಮಾತ್ರ ಉಳಿಸಿಕೊಂಡು ಹೊಸ ಕಾರ್ಡ್ ಮಾಡಿಕೊಡುವಂತೆ ಅವರು ಕಳೆದ ಮೂರು ತಿಂಗಳಿನಿಂದ ಅಧಿಕಾರಿಗಳ ಮೊರೆ ಹೋಗುತ್ತಿದ್ದಾರೆ.
“ಚಲನವಲನ ಸಾಧ್ಯವಿದ್ದಾಗ ತಹಶೀಲ್ದಾರ್ ಕಚೇರಿಗೆ ಅಲೆದಾಡಿದ್ದೆ, ಎಲ್ಲಾ ದಾಖಲೆಗಳನ್ನೂ ಕೊಟ್ಟಿದ್ದೇನೆ. ಆದರೆ ಈಗ ಹಾಸಿಗೆ ಹಿಡಿದಿದ್ದೇನೆ, ಇನ್ನು ನನ್ನಿಂದ ಅಲೆದಾಡಲು ಸಾಧ್ಯವಿಲ್ಲ” ಎಂಬ ಅವರ ಮಾತುಗಳು ಕಲ್ಲನ್ನೂ ಕರಗಿಸುವಂತಿವೆ.
ನಿರ್ಲಕ್ಷ್ಯದ ಪರಮಾವಧಿ: ಜನಪ್ರತಿನಿಧಿಗಳು ಎಲ್ಲಿದ್ದಾರೆ?
ಚುನಾವಣೆ ಬಂದಾಗ ಮನೆ ಮನೆಗೆ ಬಂದು ಮತ ಕೇಳುವ, ಕ್ರೀಡಾಕೂಟಗಳಿಗೆ ಸ್ಪಾನ್ಸರ್ ಮಾಡುವ ಜನಪ್ರತಿನಿಧಿಗಳು ಇಂತಹ ಜೀವನ್ಮರಣದ ಹೋರಾಟದಲ್ಲಿರುವ ವ್ಯಕ್ತಿಯ ಮನೆಗೆ ಯಾಕೆ ಭೇಟಿ ನೀಡುತ್ತಿಲ್ಲ? ಒಬ್ಬ ವ್ಯಕ್ತಿ ಸಶಕ್ತನಾಗಿರುವಾಗ ಮಾತ್ರ ಸಮಾಜಕ್ಕೆ ಬೇಕೆ? ಅಶಕ್ತನಾದಾಗ ಅವನನ್ನು ಕಡೆಗಣಿಸುವುದು ಎಷ್ಟು ಸರಿ? ಎಂಬ ಪ್ರಶ್ನೆಗಳು ಇಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ನ್ಯಾಯದ ನಿರೀಕ್ಷೆಯಲ್ಲಿ ಬಡಜೀವ
ಪ್ರಸ್ತುತ ಜೆಡಿಎಸ್ ಮುಖಂಡರಾದ ವರದರಾಜ್ ಅವರು ತಹಶೀಲ್ದಾರ್ ಅವರೊಂದಿಗೆ ಮಾತನಾಡಿ ಭರವಸೆ ನೀಡಿದ್ದಾರೆ. ಆದರೆ ಭರವಸೆಗಳಿಗಿಂತ ಹೆಚ್ಚಾಗಿ ಜರೀನಾ ಅವರಿಗೆ ಈಗ ಬೇಕಿರುವುದು ತುರ್ತು ಚಿಕಿತ್ಸೆ ಮತ್ತು ಅದಕ್ಕೆ ಆಸರೆಯಾಗುವ ಪಡಿತರ ಚೀಟಿ. ಅಧಿಕಾರಿಗಳು ಇನ್ನಾದರೂ ಮಾನವೀಯತೆಯ ದೃಷ್ಟಿಯಿಂದ ಕಡತಗಳ ಧೂಳು ಕೊಡವಿ, ಈ ಅಸಹಾಯಕ ಮಹಿಳೆಗೆ ನ್ಯಾಯ ಒದಗಿಸಬೇಕಿದೆ.
ಒಂದು ಜೀವ ಹೋದ ಮೇಲೆ ಹೂವಿನ ಹಾರ ಹಾಕಿ ಶೋಕ ವ್ಯಕ್ತಪಡಿಸುವುದಕ್ಕಿಂತ, ಆ ಜೀವ ಬದುಕಿರುವಾಗಲೇ ಅದಕ್ಕೆ ಆಸರೆಯಾಗುವುದು ನಾಗರಿಕ ಸಮಾಜದ ಕರ್ತವ್ಯವಲ್ಲವೇ?. ಇನ್ನಾದರೂ ಆ ನಿಟ್ಟಿನಲ್ಲಿ ಸಂಬಂಧಿಸಿದಂತ ರಿಪ್ಪನ್ ಪೇಟೆಯ ಸರ್ಕಾರಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿ. ಕ್ಯಾನ್ಸರ್ ನಿಂದ ಬಳಲುತ್ತಿರುವಂತ ಗೌಟೂರಿನ ಜರೀನಾ ಬೇಗಂ ಅವರ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ಅತ್ಯಗತ್ಯವಿರುವಂತ ರೇಷನ್ ಕಾರ್ಡ್ ಕೊಡುವ ಕೆಲಸ ಮಾಡಲಿ ಎಂಬುದು ನಮ್ಮ ಸುದ್ದಿಯ ಆಶಯವಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
BREAKING: ಬಿಕ್ಲು ಶಿವ ಕೊಲೆ ಕೇಸ್ನ ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ನಿಂದ ‘ಡಿಫಾಲ್ಟ್ ಜಾಮೀನು’ ಮಂಜೂರು
BREAKING: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಒಂದೇ ದಿನದಲ್ಲಿ ಹೂಡಿಕೆದಾರರ ₹5.87 ಲಕ್ಷ ಕೋಟಿ ಭಸ್ಮ | Share Market








