ಬೆಂಗಳೂರು : ಇತ್ತೀಚಿಗೆ ತಿಂಡಿ ತಿನಿಸುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಹಾಗೂ ಹಾನಿಕಾರಕ ಅಂಶಗಳು ಪತ್ತೆಯಾಗಿರುವ ಕುರಿತು ವರದಿಗಳನ್ನು ನೋಡಿದ್ದೇವೆ ಆದರೆ ಇದೀಗ ಹಾಲಿನಲ್ಲೂ ಕೂಡ ಕಲಬೆರಕೆ ಅಂಶ ಪಟ್ಟಿ ಆಗಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ.
ಹೌದು ರಾಜ್ಯದಲ್ಲಿ ಕಳೆದ ಜನವರಿ ವರ್ಷದ ಜನವರಿಯಿಂದ ಈ ವರ್ಷದ ಜನವರಿಯವರೆಗಿನ ಒಂದು ವರ್ಷದ ಅವಧಿಯಲ್ಲಿ ಡೇರಿಗಳಿಗೆ ಪೂರೈಕೆಯಾದ ಹಾಲಿನ 3,049 ಮಾದರಿಗಳಲ್ಲಿ ಕಲಬೆರಕೆ ಪತ್ತೆಯಾಗಿದೆ. ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಗುರುವಾರ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಭಾನಾಯಕ ಭೋಸರಾಜು ಉತ್ತರಿಸಿದರು.
ಕಲಬೆರಕೆ ಹಾಲಿನಲ್ಲಿ ಒಟ್ಟು 19 ಒಕ್ಕೂಟ, ಘಟಕಗಳ 15,15,575 ಹಾಲಿನ ಮಾದರಿಯನ್ನು ಈ ಅವಧಿಯಲ್ಲಿ ಸಂಗ್ರಹಿಸಲಾಗಿದೆ. ಹಾಸನದಲ್ಲಿ ರಾಜ್ಯದಲ್ಲೇ ಗರಿಷ್ಠ 788 ಮಾದರಿಗಳಲ್ಲಿ ಕಲಬೆರಕೆ ಪತ್ತೆಯಾಗಿದೆ. ಉಳಿದಂತೆ ಬಳ್ಳಾರಿ (588). ಶಿವಮೊಗ್ಗ (434), ಮಂಡ್ಯ (418) ಮತ್ತು ಕಲಬುರಗಿ (315) ಯಲ್ಲಿ ಹೆಚ್ಚು ಕಲಬೆರಕೆ ಪತ್ತೆಯಾಗಿದೆ. ಡೋಡ್ಲಾ ಎಂಬ ಖಾಸಗಿ ಕಂಪನಿಯ ಹಾಲಿನಲ್ಲಿ ಕಲಬೆರಕೆ ಅಂಶ ಕಂಡುಬಂದಿದೆ ಎಂದು ಭೋಸರಾಜು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಉತ್ಪಾದಕರು ಸರಬರಾಜು ಮಾಡುವ ಹಾಲಿನಲ್ಲಿ ಉಪ್ಪು ಹಾಗೂ ಸಕ್ಕರೆ ಕಲಬೆರಕೆ ಅಂಶ ಪತ್ತೆಯಾಗಿದೆ ಎಂದು ಭೋಸರಾಜು ಅವರು ಮಾಹಿತಿ ನೀಡಿದರು. ಹಾಗೆಯೇ, ಹಾಲಿನಲ್ಲಿ ಕಲಬೆರಕೆ ಅಂಶ ಪತ್ತೆ ಹಚ್ಚಲು ಎಲ್ಲಾ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಲಬೆರಕೆ ಪರೀಕ್ಷೆ ಕಿಟ್ ನೀಡಲಾಗಿದ್ದು, ಕಲಬೆರಕೆ ಅಂಶಗಳನ್ನು ಪರೀಕ್ಷಿಸಲಾಗುತ್ತಿದೆ.
3 ತಿಂಗಳ ಜೈಲು ಶಿಕ್ಷೆ
ಕಲಬೆರಕೆಯು ಕನಿಷ್ಠ 3 ತಿಂಗಳ ಜೈಲು ಶಿಕ್ಷೆಯಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿದ್ದರೂ, ಸಹ ಡೇರಿಗೆ ಕಲಬೆರಕೆ ಹಾಲು ಪೂರೈಸಿರುವವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಬದಲಾಗಿ, ಜಿಲ್ಲಾ ಹಾಲು ಒಕ್ಕೂಟಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪೂರೈಸುವ ಹಾಲಿನಲ್ಲಿ ಕಲಬೆರಕೆ ಅಂಶ ಕಂಡುಬಂದರೆ ಆ ಹಾಲನ್ನು ತಿರಸ್ಕರಿಸಿ, ಉತ್ಪಾದಕರಿಗೆ ಅರಿವು ಮೂಡಿಸಿ, ಸಂಘದ ಕಾರ್ಯಕಾರಿ ಮಂಡಳಿ ಹಾಗೂ ಸಿಬ್ಬಂದಿಗೆ ಕಲಬೆರಕೆ ಪುನರಾವರ್ತನೆ ಆಗದಂತೆ ಎಚ್ಚರಿಕೆ ನೀಡಲಾಗಿದೆ.








