ಬೆಂಗಳೂರು: ಬೀರ್ ನಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ ಇರುತ್ತದೆ, ಇದು ಕುಡಿದರೆ ದೇಹಕ್ಕೆ ಏನೂ ಆಗಲ್ಲ ಇದು ಇಂದಿನ ಯುವಜನತೆ ಮತ್ತು ಮದ್ಯಪಾನ ಮಾಡುವವರು ಹೆಚ್ಚಾಗಿ ನಂಬಿರುವ ಮಾತು. ಪಾರ್ಟಿಗಳಿರಲಿ ಅಥವಾ ಬೇಸಿಗೆಯಿರಲಿ, ಬೀರ್ ಒಂದು ಸುರಕ್ಷಿತ ಪಾನೀಯ ಎಂಬ ಭ್ರಮೆಯಲ್ಲಿ ಅನೇಕರು ಇರುತ್ತಾರೆ.
ಆದರೆ, ಈ ನಂಬಿಕೆ ಎಷ್ಟು ಅಪಾಯಕಾರಿ ಎಂಬುದು ನಿಮಗೆ ತಿಳಿದರೆ ಆಶ್ಚರ್ಯವಾಗಬಹುದು. ಅಲ್ಪ ಪ್ರಮಾಣದಲ್ಲಿ ಬೀರ್ ಸೇವನೆ ಹಾನಿಕಾರಕವಲ್ಲ ಎಂದು ಭಾವಿಸುವುದು ಪ್ರಾಣಕ್ಕೆ ತಂದೊಡ್ಡುವ ದೊಡ್ಡ ತಪ್ಪು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಆಲ್ಕೋಹಾಲ್ ಪ್ರಮಾಣ: ಒಂದು ತಪ್ಪು ಕಲ್ಪನೆ
ಸಾಮಾನ್ಯವಾಗಿ ಬೀರ್‌ನಲ್ಲಿ ಶೇ. 4 ರಿಂದ 5 ರಷ್ಟು ಮಾತ್ರ ಆಲ್ಕೋಹಾಲ್ ಇರುತ್ತದೆ, ಹಾಗಾಗಿ ಇದು ವಿಸ್ಕಿ ಅಥವಾ ರಮ್‌ನಂತೆ ದೇಹವನ್ನು ಹಾಳು ಮಾಡುವುದಿಲ್ಲ ಎಂದು ಹಲವರು ವಾದಿಸುತ್ತಾರೆ. ದಿನಕ್ಕೆ ಒಂದು ಅಥವಾ ಎರಡು ಬೀರ್ ಕುಡಿದರೂ ತೊಂದರೆಯಿಲ್ಲ ಎಂದು ಧೈರ್ಯವಾಗಿರುತ್ತಾರೆ.ಆದರೆ, ಮಾರುಕಟ್ಟೆಯಲ್ಲಿ ಸಿಗುವ ಕೆಲವು ಬ್ರ್ಯಾಂಡ್‌ಗಳ ಬೀರ್‌ನಲ್ಲಿ ವೈನ್‌ಗೆ ಸಮಾನವಾದ ಆಲ್ಕೋಹಾಲ್ ಇರುತ್ತದೆ ಎಂಬುದು ಯಾರಿಗೂ ತಿಳಿಯದ ವಿಷಯ. “ಎಷ್ಟು ಬೀರ್ ಕುಡಿದರೆ ಸುರಕ್ಷಿತ?” ಎಂಬ ಪ್ರಶ್ನೆಗೆ ವೈದ್ಯಕೀಯ ತಜ್ಞರು ನೀಡುವ ಒಂದೇ ಉತ್ತರ: ‘ಸುರಕ್ಷಿತ ಮಿತಿಯೆಂಬುದು ಯಾವುದೂ ಇಲ್ಲ’.
ಲಿವರ್ ಮೇಲೆ ನಿಶ್ಯಬ್ದ ದಾಳಿ
ನಾವು ಸೇವಿಸುವ ಆಲ್ಕೋಹಾಲ್ ನೇರವಾಗಿ ಯಕೃತ್ತಿನ (Liver) ಮೇಲೆ ಪ್ರಭಾವ ಬೀರುತ್ತದೆ. ಆಲ್ಕೋಹಾಲ್ ಅನ್ನು ಜೀರ್ಣಿಸುವ ಪ್ರಕ್ರಿಯೆಯಲ್ಲಿ ಲಿವರ್‌ನ ಕೆಲವು ಜೀವಕೋಶಗಳು ಸಾಯುತ್ತವೆ. ಸತ್ತ ಜೀವಕೋಶಗಳ ಜಾಗದಲ್ಲಿ ಹೊಸ ಜೀವಕೋಶಗಳನ್ನು ಉತ್ಪಾದಿಸುವ ಅದ್ಭುತ ಸಾಮರ್ಥ್ಯ ಯಕೃತ್ತಿಗೆ ಇರುವುದು ನಿಜ.
ಆದರೆ, ನಾವು ನಿರಂತರವಾಗಿ ಬೀರ್ ಅಥವಾ ಮದ್ಯ ಸೇವಿಸುತ್ತಿದ್ದರೆ, ಹೊಸ ಜೀವಕೋಶಗಳನ್ನು ಪುನರುತ್ಪಾದಿಸುವ ಶಕ್ತಿಯನ್ನು ಯಕೃತ್ತು ಕ್ರಮೇಣ ಕಳೆದುಕೊಳ್ಳುತ್ತದೆ. ಇದರ ಪರಿಣಾಮವಾಗಿ ‘ಲಿವರ್ ಸಿರೋಸಿಸ್’ ನಂತಹ ಮಾರಣಾಂತಿಕ ಕಾಯಿಲೆಗಳು ಸಂಭವಿಸುವ ಅಪಾಯವಿದೆ.
ಸಕ್ಕರೆ ಕಾಯಿಲೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು
ಈಗಾಗಲೇ ಲಿವರ್ ಸಮಸ್ಯೆ ಇರುವವರು ಬೀರ್‌ನಿಂದ ದೂರವಿರಲೇಬೇಕು. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಇನ್ನು ಮಧುಮೇಹಿಗಳು (Diabetes) ಬೀರ್ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ತನೆ ಏರಿಕೆಯಾಗುತ್ತದೆ. ಇದರೊಂದಿಗೆ ಗ್ಯಾಸ್ಟ್ರಿಕ್ ಮತ್ತು ಅಲ್ಸರ್‌ನಂತಹ ಜೀರ್ಣಾಂಗ ಸಂಬಂಧಿ ಸಮಸ್ಯೆಗಳೂ ಕಾಡುತ್ತವೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಎಚ್ಚರಿಕೆ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, “ಮದ್ಯದ ಒಂದು ಹನಿಯೂ ಸಹ ದೇಹಕ್ಕೆ ಸುರಕ್ಷಿತವಲ್ಲ.” ವೈನ್ ಆಗಿರಲಿ ಅಥವಾ ಬೀರ್ ಆಗಿರಲಿ, ಅದರಲ್ಲಿರುವ ಆಲ್ಕೋಹಾಲ್ ಅನ್ನು ವೈದ್ಯಕೀಯ ಭಾಷೆಯಲ್ಲಿ ಒಂದು ವಿಷಕಾರಿ ಪದಾರ್ಥ ಎಂದೇ ಪರಿಗಣಿಸಲಾಗುತ್ತದೆ.
ಅಷ್ಟೇ ಅಲ್ಲದೆ, ಅಂತರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ (IARC) ಆಲ್ಕೋಹಾಲ್ ಅನ್ನು ‘ಗ್ರೂಪ್-1 ಕಾರ್ಸಿನೋಜೆನ್’ ಎಂದು ವರ್ಗೀಕರಿಸಿದೆ. ಅಂದರೆ ತಂಬಾಕು ಮತ್ತು ವಿಕಿರಣಗಳಂತೆ, ಇದು ಕೂಡ ನೇರವಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಪದಾರ್ಥವಾಗಿದೆ.








