ಶಿವಮೊಗ್ಗ: ಇತ್ತೀಚೆಗೆ ನಡೆದ ಸಾಗರ ಮಾರಿಕಾಂಬಾ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ, ಅಭ್ಯರ್ಥಿಯಾಗಿದ್ದ ತಾರಾಮೂರ್ತಿ ಅವರು ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೆದ್ದವರಿಗೆ ಅಭಿನಂದನೆ:
ವಿಡಿಯೋ ಸಂದೇಶದ ಮೂಲಕ ಮಾತನಾಡಿರುವ ಅವರು, “ಚುನಾವಣೆಯಲ್ಲಿ ವಿಜೇತರಾದ ಎಲ್ಲಾ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಎಲ್ಲರೂ ಸೇರಿ ದೇವಸ್ಥಾನದ ಅಭಿವೃದ್ಧಿಗೆ ಮತ್ತು ಸಮಾಜದ ಹಿತದೃಷ್ಟಿಯಿಂದ ಉತ್ತಮ ಕೆಲಸಗಳನ್ನು ಮಾಡಲಿ” ಎಂದು ಹಾರೈಸಿದರು.
ಅಕ್ರಮಗಳ ಬಗ್ಗೆ ಆಕ್ರೋಶ:
ತಾವೂ ಸಹ ಚುನಾವಣಾ ಕಣದಲ್ಲಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದಾಗಿ ತಿಳಿಸಿದ ಅವರು, ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವುದಾಗಿ ಹೇಳಿದರು. ಆದರೆ, ಧಾರ್ಮಿಕ ಕ್ಷೇತ್ರದ ಚುನಾವಣೆಯಲ್ಲಿ ಹಣ ಮತ್ತು ಹೆಂಡದ ಪ್ರಭಾವ ಹೆಚ್ಚಾಗಿರುವುದು ವಿಷಾದನೀಯ ಎಂದು ಮಾರ್ಮಿಕವಾಗಿ ನುಡಿದರು.
”ರಾಜಕೀಯ ಚುನಾವಣೆಗಳಲ್ಲಿ ಹಣದ ಬಲ ನೋಡಿರುತ್ತೇವೆ, ಆದರೆ ಒಂದು ಪವಿತ್ರ ಧಾರ್ಮಿಕ ಕ್ಷೇತ್ರದ ಆಡಳಿತ ಮಂಡಳಿ ಆಯ್ಕೆಗೆ ಹಣ ಹಂಚಿ ಮತ ಪಡೆಯುವುದು ಬಹಳ ದೊಡ್ಡ ದುರಂತ. ಇದು ಒಳ್ಳೆಯ ಬೆಳವಣಿಗೆಯಲ್ಲ,” ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮತದಾರರಿಗೆ ಕಿವಿಮಾತು:
ಮತದಾರರು ಇಂತಹ ಆಮಿಷಗಳಿಗೆ ಒಳಗಾಗಬಾರದಿತ್ತು ಎಂದು ಅಭಿಪ್ರಾಯಪಟ್ಟ ಅವರು, ತಾವು ಒಬ್ಬ ದೈವಾರಾಧಕರಾಗಿದ್ದು, ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ನೆನಪಿಸಿದರು. ಕೊನೆಯಲ್ಲಿ, ಸಾಗರದ ಜನತೆ ಮತ್ತು ದೇವಸ್ಥಾನದ ಹಿತಕ್ಕಾಗಿ ಹೊಸ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…








