ಶಿವಮೊಗ್ಗ: ಅಧಿಕಾರಿಗಳು ಮನಸ್ಸು ಮಾಡಿದರೆ ಸರ್ಕಾರದ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ತಲುಪುತ್ತವೆ ಎಂಬುದಕ್ಕೆ ಸಾಗರದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಸಾಗರ ಪಟ್ಟಣದ ಭಾರತಿ ಕೋಂ ಗಜಾನನ ಎಂಬ ವೃದ್ಧ ದಂಪತಿಗಳ ಕಷ್ಟಕ್ಕೆ ಸ್ಪಂದಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಅಧಿಕಾರಿಗಳೊಂದಿಗೆ ಇಂದು ಅವರ ಮನೆಗೇ ತೆರಳಿ ವಿವಿಧ ಸೌಲಭ್ಯಗಳನ್ನು ವಿತರಿಸುವ ಮೂಲಕ ಗಮನ ಸೆಳೆದಿದ್ದಾರೆ. ಆ ಮೂಲಕ ಶಾಸಕ ಗೋಪಾಲಕೃಷ್ಣ ಬೇಳೂರು ಮಾನವೀಯತೆ ಮೆರೆದಿದ್ದಾರೆ.
ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ ತಲುಪಿಸಿ, ಮಾನವೀಯತೆ ಮೆರೆದ ಶಾಸಕರು
ಕಳೆದ ಹಲವು ದಿನಗಳಿಂದ ಸರಿಯಾದ ದಾಖಲೆಗಳಿಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದ ಈ ವೃದ್ಧ ದಂಪತಿಗಳ ಬಗ್ಗೆ ಮಾಹಿತಿ ಪಡೆದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ವೃದ್ಧ ದಂಪತಿಗಳಾದಂತ ಭಾರತಿ ಅವರ ಆಧಾರ್ ಕಾರ್ಡ್ ಸಮಸ್ಯೆಯನ್ನು ಸರಿ ಪಡಿಸಿದ್ದರು.
ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಸಾಗರ ಎಸಿ ವೀರೇಶ್ ಕುಮಾರ್, ತಹಸೀಲ್ದಾರ್ ರಶ್ಮಿ ಹಾಲೇಶ್ ಹಾಗೂ ಪತ್ರಕರ್ತ ಮಾ.ಸಾ.ನಂಜುಂಡಸ್ವಾಮಿ ಅವರು ದಂಪತಿಗಳ ಮನೆಗೆ ಭೇಟಿ ನೀಡಿದರು. ಸ್ಥಳದಲ್ಲೇ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಹಾಗೂ ಅಂಗವಿಕಲ ಕಾರ್ಡ್ಗಳನ್ನು ಹಸ್ತಾಂತರಿಸಿದರು. ಆ ಮೂಲಕ ಮನೆ ಭಾಗಿಲಿಗೆ ಸರ್ಕಾರಿ ಸೌಲಭ್ಯವನ್ನು ತಲುಪಿಸುವಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಯಶಸ್ವಿಯಾದರು.
ವೈಯಕ್ತಿಕ ನೆರವು ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು
ಕೇವಲ ಸರ್ಕಾರಿ ದಾಖಲೆಗಳನ್ನು, ಸೌಲಭ್ಯಗಳನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಒದಗಿಸಿಕೊಟ್ಟಿದ್ದಲ್ಲದೇ, ವೃದ್ಧ ದಂಪತಿಗಳ ದಯನೀಯ ಸ್ಥಿತಿ ಕಂಡು ಮಮ್ಮಲ ಮರುಗಿದರು. ತಮ್ಮ ವೈಯಕ್ತಿಕವಾಗಿ ಧನ ಸಹಾಯ ನೀಡಿದ ಅವರು, ಶಿಥಿಲಗೊಂಡಿದ್ದ ಅವರ ಮನೆಗೆ ತಕ್ಷಣವೇ ಸುಣ್ಣ-ಬಣ್ಣ ಹಚ್ಚಿ ಸುಸ್ಥಿತಿಗೆ ತಂದುಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಯಾವುದೇ ಸಂದರ್ಭದಲ್ಲೂ ಸಹಾಯ ಬೇಕಿದ್ದರೇ ತಮ್ಮ ಮನೆ ಸಮೀಪದಲ್ಲೇ ಇದೆ ಬಂದು ಭೇಟಿಯಾಗುವಂತೆಯೂ ವೃದ್ಧ ದಂಪತಿಗಳಿಗೆ ಕೋರಿದರು.
ಅಧಿಕಾರಿಗಳ ಈ ತುರ್ತು ಸ್ಪಂದನೆ ಮತ್ತು ಶಾಸಕರ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕಚೇರಿಗಳಿಗೆ ಅಲೆಯಲಾಗದ ಸ್ಥಿತಿಯಲ್ಲಿದ್ದ ವೃದ್ಧ ದಂಪತಿಗಳು, ತಮ್ಮ ಮನೆ ಬಾಗಿಲಿಗೇ ಬಂದ ಭಾಗ್ಯವನ್ನು ಕಂಡು ಭಾವುಕರಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹಾಗೂ ಅಧಿಕಾರಿಗಳು, ಮಾಸ ನಂಜುಂಡಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಸಾಗರ ನಗರಸಭೆಯ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಕಾಂಗ್ರೆಸ್ ಮುಖಂಡ ಚೇತನ್ ರಾಜ್ ಕಣ್ಣೂರ್, ಹಿರಿಯ ಪತ್ರಕರ್ತ ಮಾ.ವೆಂ.ಪ್ರಸಾದ್, ಗೌತಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು….
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಿ: ಸಾಗರ ಶಾಸಕ ಬೇಳೂರು ಸೂಚನೆ








