ಬೆಂಗಳೂರು: ರಾಜ್ಯದಲ್ಲಿ ಭೂ ಪರಿವರ್ತನೆಯಾದ (Conversion) ಕೃಷಿಯೇತರ ಜಮೀನುಗಳ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲು ಕಂದಾಯ ಇಲಾಖೆ ಮುಂದಾಗಿದೆ. ಇನ್ನು ಮುಂದೆ ಇ-ಖಾತಾ ಇಲ್ಲದಿದ್ದರೂ ಸಹ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆಯಾದ ಜಮೀನುಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು.
ರಾಜಸ್ವ ಪಾವತಿ ಕಡ್ಡಾಯ: ಇ-ಖಾತಾ ಇಲ್ಲದಿದ್ದರೂ ನೋಂದಣಿಗೆ ಅವಕಾಶ ನೀಡಲಾಗುವುದು, ಆದರೆ ಅಂತಹ ಜಮೀನುಗಳಿಗೆ ಕೃಷಿಯೇತರ ಆಸ್ತಿ ಎಂದು ಪರಿಗಣಿಸಿ ನಿಯಮಾನುಸಾರ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ.
ಕಾವೇರಿ 2.0 ತಂತ್ರಾಂಶದಲ್ಲಿ ಬದಲಾವಣೆ: ಈ ಸೌಲಭ್ಯವನ್ನು ಒದಗಿಸಲು ‘ಕಾವೇರಿ 2.0’ ತಂತ್ರಾಂಶದಲ್ಲಿ ಅಗತ್ಯ ತಾಂತ್ರಿಕ ಮಾರ್ಪಾಡುಗಳನ್ನು ಮಾಡಲಾಗುತ್ತಿದೆ.
ಅಕ್ರಮ ನೋಂದಣಿಗೆ ಬ್ರೇಕ್: ಈ ಹಿಂದೆ ಕೃಷಿ ಜಮೀನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾದ ನಂತರವೂ ಪಹಣಿ (RTC) ಚಾಲ್ತಿಯಲ್ಲಿರುತ್ತಿತ್ತು. ಇದನ್ನು ದುರುಪಯೋಗಪಡಿಸಿಕೊಂಡು ನಡೆಯುತ್ತಿದ್ದ ಅಕ್ರಮ ವ್ಯವಹಾರಗಳನ್ನು ತಡೆಯಲು ‘ಭೂಮಿ’ ತಂತ್ರಾಂಶದಲ್ಲಿ ಅಂತಹ ಜಮೀನುಗಳನ್ನು ‘ಕೃಷಿಯೇತರ’ ಎಂದು ಫ್ಲಾಗ್ ಮಾಡಲಾಗುವುದು.
ಈ ನಿರ್ಧಾರಕ್ಕೆ ಕಾರಣವೇನು?
ಸಾಮಾನ್ಯವಾಗಿ ಕೃಷಿ ಜಮೀನು ಕೃಷಿಯೇತರ ಬಳಕೆಗೆ ಪರಿವರ್ತನೆಯಾದ ಬಳಿಕ ಇ-ಖಾತಾ ಪಡೆಯಲು ದೀರ್ಘ ಕಾಲಾವಕಾಶ ಬೇಕಾಗುತ್ತದೆ. ಈ ಅವಧಿಯಲ್ಲಿ ತುರ್ತಾಗಿ ನೋಂದಣಿ ಮಾಡಿಸಬೇಕಾದ ಮಾಲೀಕರು ತೊಂದರೆ ಅನುಭವಿಸುತ್ತಿದ್ದರು. ಇ-ಖಾತಾ ಸೃಜನೆಯಾಗುವವರೆಗೆ ಕಾಯುವ ಅನಿವಾರ್ಯತೆಯನ್ನು ಹೋಗಲಾಡಿಸಲು ಮತ್ತು ಸರ್ಕಾರದ ರಾಜಸ್ವ ಸಂಗ್ರಹಕ್ಕೆ ವೇಗ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.
ತಾಂತ್ರಿಕ ಬದಲಾವಣೆ:
ಭೂ ಪರಿವರ್ತನೆಯಾದ ಜಮೀನುಗಳ ಪಹಣಿಗಳಲ್ಲಿ ಭೂಕಂದಾಯವನ್ನು ಕಡಿತಗೊಳಿಸಿ, ನಗರ ಸ್ಥಳೀಯ ಸಂಸ್ಥೆಗಳು ಅಥವಾ ನಗರಾಭಿವೃದ್ಧಿ ಪ್ರಾಧಿಕಾರಗಳು ಇ-ಖಾತಾ ನೀಡುವ ಪ್ರಕ್ರಿಯೆ ನಡೆಯುತ್ತದೆ. ಈಗ ‘ಭೂಮಿ’ ಮತ್ತು ‘ಕಾವೇರಿ’ ತಂತ್ರಾಂಶಗಳ ನಡುವೆ ಸಮನ್ವಯ ಸಾಧಿಸಲಾಗಿದ್ದು, ಇ-ಖಾತಾ ಲಭ್ಯವಿಲ್ಲದಿದ್ದರೂ ಪರಿವರ್ತಿತ ದಾಖಲೆಗಳ ಆಧಾರದ ಮೇಲೆ ನೋಂದಣಿ ನಡೆಸಲು ಹಾದಿ ಸುಗಮವಾಗಿದೆ.








