ಭಾರತದಲ್ಲಿ ಅಡುಗೆ ಮಾಡಲು ಬಹುತೇಕ ಎಲ್ಲಾ ಮನೆಗಳಲ್ಲೂ ಎಲ್‌ಪಿಜಿ (LPG) ಸಿಲಿಂಡರ್‌ಗಳನ್ನು ಬಳಸಲಾಗುತ್ತದೆ. ಆದರೆ, ಈಗೀಗ ಅನೇಕ ನಗರಗಳಲ್ಲಿ ಪೈಪ್‌ಲೈನ್ ಗ್ಯಾಸ್ ಅಂದರೆ ಪಿಎನ್‌ಜಿ (PNG) ಸೌಲಭ್ಯ ಕೂಡ ವೇಗವಾಗಿ ವಿಸ್ತರಣೆಯಾಗುತ್ತಿದೆ. ಹೀಗಿರುವಾಗ, ಮನೆಗೆ ಸಿಲಿಂಡರ್ ತರಿಸುವುದು ಅಗ್ಗವೇ ಅಥವಾ ಪೈಪ್‌ಲೈನ್ ಗ್ಯಾಸ್ ಸಂಪರ್ಕ ಪಡೆಯುವುದು ಅಗ್ಗವೇ ಎಂಬ ಪ್ರಶ್ನೆ ಹಲವರಲ್ಲಿದೆ.
ಎಲ್‌ಪಿಜಿ ಮತ್ತು ಪಿಎನ್‌ಜಿ ಎರಡೂ ತಮ್ಮದೇ ಆದ ಅನುಕೂಲಗಳು ಮತ್ತು ವೆಚ್ಚಗಳನ್ನು ಹೊಂದಿವೆ. ಹೀಗಾಗಿ ಸರಿಯಾದ ಆಯ್ಕೆಯನ್ನು ಮಾಡಲು ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಎಲ್‌ಪಿಜಿ ಸಿಲಿಂಡರ್‌ಗೆ ನೀವು ಒಮ್ಮೆಲೇ ಪೂರ್ಣ ಹಣ ಪಾವತಿಸಬೇಕಾಗುತ್ತದೆ, ಆದರೆ ಪೈಪ್‌ಲೈನ್ ಗ್ಯಾಸ್ ಬಿಲ್ ನಿಮ್ಮ ಬಳಕೆಗೆ ಅನುಗುಣವಾಗಿ ಪ್ರತಿ ತಿಂಗಳು ಬರುತ್ತದೆ. ಬೆಲೆ, ಸೌಲಭ್ಯ ಮತ್ತು ವೆಚ್ಚದ ಆಧಾರದ ಮೇಲೆ ಇವೆರಡರ ನಡುವಿನ ಪ್ರಮುಖ ವ್ಯತ್ಯಾಸಗಳು ಇಲ್ಲಿವೆ:
ಎಲ್‌ಪಿಜಿ ಸಿಲಿಂಡರ್ (LPG) ಖರ್ಚು ಎಷ್ಟು?
ಭಾರತದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಸಾಮಾನ್ಯವಾಗಿ 14.2 ಕೆ.ಜಿ. ಇರುತ್ತದೆ.
ನಗರಗಳಿಗೆ ಅನುಗುಣವಾಗಿ ಇದರ ಬೆಲೆ ಸರಿಸುಮಾರು 800 ರಿಂದ 1100 ರೂಪಾಯಿಗಳವರೆಗೆ ಇರಬಹುದು.
ಸಾಮಾನ್ಯ ಗಾತ್ರದ ಕುಟುಂಬವೊಂದಕ್ಕೆ ಈ ಒಂದು ಸಿಲಿಂಡರ್ ಸುಮಾರು ಒಂದು ತಿಂಗಳ ಕಾಲ ಬರುತ್ತದೆ.
ಪೈಪ್‌ಲೈನ್ ಗ್ಯಾಸ್ (PNG) ಖರ್ಚು ಎಷ್ಟು?
ಪೈಪ್‌ಲೈನ್ ಗ್ಯಾಸ್‌ಗೆ ವಿದ್ಯುತ್ ಬಿಲ್‌ನಂತೆ ಮೀಟರ್ ಅಳವಡಿಸಲಾಗಿರುತ್ತದೆ. ನೀವು ಎಷ್ಟು ಗ್ಯಾಸ್ ಬಳಸುತ್ತೀರೋ ಅಷ್ಟು ಮಾತ್ರ ಬಿಲ್ ಬರುತ್ತದೆ.
ಹಲವು ನಗರಗಳಲ್ಲಿ ಇದರ ಬೆಲೆ ಪ್ರತಿ ಯೂನಿಟ್‌ಗೆ (SCM) ಅಂದಾಜು 40 ರಿಂದ 60 ರೂಪಾಯಿಗಳಷ್ಟಿರುತ್ತದೆ.
ಯಾವುದರಲ್ಲಿ ಹೆಚ್ಚು ಉಳಿತಾಯ?
ನಿರಂತರ ಬಳಕೆಯ ಬಗ್ಗೆ ಮಾತನಾಡುವುದಾದರೆ, ಅನೇಕ ಸಂದರ್ಭಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ ಹೋಲಿಸಿದರೆ ಪೈಪ್‌ಲೈನ್ ಗ್ಯಾಸ್ ಸ್ವಲ್ಪ ಅಗ್ಗವಾಗಿದೆ. ಇದಲ್ಲದೆ, ಅಡುಗೆ ಮಾಡುವಾಗ ಮಧ್ಯದಲ್ಲೇ ಗ್ಯಾಸ್ ಖಾಲಿಯಾಗುತ್ತದೆ ಎಂಬ ಆತಂಕ ಪಿಎನ್‌ಜಿಯಲ್ಲಿ ಇರುವುದಿಲ್ಲ.
ಸೌಲಭ್ಯದಲ್ಲಿರುವ ವ್ಯತ್ಯಾಸವೇನು?
ಸೌಲಭ್ಯದ ವಿಚಾರಕ್ಕೆ ಬಂದರೆ ಎರಡರಲ್ಲೂ ಸಾಕಷ್ಟು ವ್ಯತ್ಯಾಸವಿದೆ. ಎಲ್‌ಪಿಜಿ ಸಿಲಿಂಡರ್ ಖಾಲಿಯಾದಾಗಲೆಲ್ಲಾ ಬುಕ್ ಮಾಡಬೇಕು ಮತ್ತು ಡೆಲಿವರಿಗಾಗಿ ಕಾಯಬೇಕು. ಆದರೆ, ಪೈಪ್‌ಲೈನ್ ಗ್ಯಾಸ್ ನಲ್ಲಿ ಈ ತಲೆನೋವಿಲ್ಲ. ಇದು ನೇರವಾಗಿ ಪೈಪ್ ಮೂಲಕ ಮನೆಗೆ ಬರುತ್ತದೆ ಮತ್ತು ದಿನದ 24 ಗಂಟೆಯೂ ಲಭ್ಯವಿರುತ್ತದೆ.
ಯಾವುದು ಉತ್ತಮ ಆಯ್ಕೆ?
ಪೈಪ್‌ಲೈನ್ ಗ್ಯಾಸ್ ಸೌಲಭ್ಯವಿರುವ ಕಡೆಗಳಲ್ಲಿ ಜನರು ಇದನ್ನೇ ಹೆಚ್ಚು ಅನುಕೂಲಕರ ಎಂದು ಭಾವಿಸುತ್ತಿದ್ದಾರೆ. ಪಿಎನ್‌ಜಿ ಲಭ್ಯವಿಲ್ಲದ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಮಾತ್ರ ಪ್ರಮುಖ ಆಯ್ಕೆಯಾಗಿ ಉಳಿದಿದೆ. ನಿಮ್ಮ ಏರಿಯಾದಲ್ಲಿ ಎರಡೂ ಆಯ್ಕೆಗಳು ಲಭ್ಯವಿದ್ದು, ನೀವು ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದರೆ, ಗ್ಯಾಸ್ ಪೈಪ್‌ಲೈನ್ (PNG) ಹೆಚ್ಚು ಉತ್ತಮ ಮತ್ತು ಆರಾಮದಾಯಕ ಆಯ್ಕೆಯಾಗಿದೆ.








