ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರವು ಮಹತ್ವದ ರಿಲೀಫ್ ನೀಡಿದ್ದು, ಸೇವಾ ನಿಯಮಗಳ ಪ್ರಕಾರ ಕಡ್ಡಾಯವಾಗಿರುವ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ (Computer Literacy Test – CLT) ಯಲ್ಲಿ ಉತ್ತೀರ್ಣರಾಗಲು ನೀಡಲಾಗಿದ್ದ ಗಡುವನ್ನು ಮತ್ತೊಂದು ವರ್ಷಗಳ ಕಾಲ ವಿಸ್ತರಿಸಿ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಈ ಹಿಂದೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸು ಮಾಡಲು 31 ಡಿಸೆಂಬರ್ 2025 ರವರೆಗೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಹೊರಡಿಸಿರುವ ಹೊಸ ಅಧಿಸೂಚನೆಯ ಅನ್ವಯ, ಈ ಗಡುವನ್ನು 31 ಡಿಸೆಂಬರ್ 2026 ರವರೆಗೆ ವಿಸ್ತರಿಸಲಾಗಿದೆ.
ಪೂರ್ವಾನ್ವಯವಾಗಿ ಜಾರಿಗೆ:
ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012ಕ್ಕೆ ಸರ್ಕಾರವು ತಿದ್ದುಪಡಿ ತಂದಿದ್ದು, ಇದನ್ನು ‘ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) (ತಿದ್ದುಪಡಿ) ನಿಯಮಗಳು, 2026’ ಎಂದು ಹೆಸರಿಸಲಾಗಿದೆ.
ಈ ತಿದ್ದುಪಡಿಯ ಅನ್ವಯ ಮೂಲ ನಿಯಮದ ನಿಯಮ 2 ಹಾಗೂ ನಿಯಮ 3ರ ಉಪನಿಯಮ (1) ಮತ್ತು (2) ರಲ್ಲಿ ಉಲ್ಲೇಖಿಸಲಾಗಿದ್ದ “31.12.2025 ರೊಳಗೆ” ಎಂಬ ಪದ ಹಾಗೂ ಅಂಕಿಗಳ ಬದಲಿಗೆ “31.12.2026 ರೊಳಗೆ” ಎಂದು ಬದಲಾಯಿಸಲಾಗಿದೆ. ವಿಶೇಷವೆಂದರೆ, ಈ ತಿದ್ದುಪಡಿಯು ಪೂರ್ವಾನ್ವಯವಾಗಿ ಅಂದರೆ 01 ಜನವರಿ 2026 ರಿಂದಲೇ ಜಾರಿಗೆ ಬಂದಿದೆ ಎಂದು ಭಾವಿಸತಕ್ಕದ್ದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ರಾಜ್ಯಪಾಲರ ಆದೇಶಾನುಸಾರ ಡಿಪಿಎಆರ್ (ಸೇವಾ ನಿಯಮಗಳು-3) ಸರ್ಕಾರದ ಅಧೀನ ಕಾರ್ಯದರ್ಶಿ ಪ್ರತಿಭಾ.ಕೆ ಅವರು ಮಾರ್ಚ್ 06, 2026ರಂದು ಈ ಅಧಿಸೂಚನೆ ಹೊರಡಿಸಿದ್ದಾರೆ. ಈ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ಅಧಿಕಾರಿಗಳಿಗೆ ರವಾನಿಸಲಾಗಿದೆ.









