ನವದೆಹಲಿ: ವಾಹನ ಮಾಲೀಕರಿಗೆ ನೆಮ್ಮದಿಯ ಸುದ್ದಿಯೊಂದನ್ನು ಕೇಂದ್ರ ಸಾರಿಗೆ ಸಚಿವಾಲಯ ನೀಡಿದೆ. ವಾಹನದ ಮೇಲಿರುವ ಸಾಲ ಪೂರ್ಣಗೊಂಡ ತಕ್ಷಣ, ಆರ್ಸಿ (ನೋಂದಣಿ ಪ್ರಮಾಣಪತ್ರ) ಪುಸ್ತಕದಿಂದ ಬ್ಯಾಂಕ್ ಹೆಸರನ್ನು ತೆಗೆದುಹಾಕಲು ಇನ್ನು ಮುಂದೆ ಆರ್ಟಿಒ ಅಥವಾ ಬ್ಯಾಂಕ್ಗಳಿಗೆ ಅಲೆಯುವ ಅವಶ್ಯಕತೆಯಿಲ್ಲ. ಈ ಪ್ರಕ್ರಿಯೆಯನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸುವ ಹೊಸ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಸ್ವಯಂಚಾಲಿತ ರದ್ದತಿ: ಸಾಲ ತೀರಿದ ಕೂಡಲೇ ಆರ್ಸಿಯಲ್ಲಿರುವ ಹಣಕಾಸು ಸಂಸ್ಥೆಯ ಹೆಸರು (Hypothecation) ತಂತಾನೇ ರದ್ದಾಗಲಿದೆ.ಈ ಮೊದಲು ಬ್ಯಾಂಕ್ನಿಂದ ಎನ್ಒಸಿ (NOC) ಪಡೆದು, ಆರ್ಟಿಒ ಕಚೇರಿಗೆ ಅಲೆದಾಡಬೇಕಿತ್ತು. ಇನ್ನು ಮುಂದೆ ಈ ತೊಂದರೆ ಇರುವುದಿಲ್ಲ.
ಯುಎಲ್ಐ ಬಳಕೆ: ಆರ್ಬಿಐನ ಯುನಿಫೈಡ್ ಲೆಂಡಿಂಗ್ ಇಂಟರ್ಫೇಸ್ (ULI) ತಂತ್ರಜ್ಞಾನವನ್ನು ಬಳಸಿಕೊಂಡು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಇ-ವಾಹನ್ ಪೋರ್ಟಲ್: ಸಾಲ ತೀರಿದ ನಂತರ ಹೈಪೋಥಿಕೇಶನ್ ರದ್ದಾಗಿರುವ ಬಗ್ಗೆ ಮಾಲೀಕರಿಗೆ ‘ಇ-ವಾಹನ್’ ಪೋರ್ಟಲ್ ಮೂಲಕ ಎಸ್ಎಂಎಸ್ (SMS) ಸಂದೇಶ ಬರಲಿದೆ.
ಯಾವಾಗ ಜಾರಿ?
ಈ ಹೊಸ ವ್ಯವಸ್ಥೆಯು ಮಾರ್ಚ್ 1 ರಿಂದಲೇ ಜಾರಿಗೆ ಬಂದಿದೆ. ಆರಂಭಿಕ ಹಂತದಲ್ಲಿ ಎಸ್ಬಿಐ (SBI), ಚೋಳಮಂಡಲಂ, ಶ್ರೀರಾಮ್ ಫೈನಾನ್ಸ್ ಮತ್ತು ಸುಂದರಂ ಫೈನಾನ್ಸ್ ಸೇರಿದಂತೆ ಐದು ಪ್ರಮುಖ ಹಣಕಾಸು ಸಂಸ್ಥೆಗಳು ಈ ಯೋಜನೆಯಡಿ ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲೇ ಇತರ ಬ್ಯಾಂಕ್ ಗಳಿಗೂ ಇದು ವಿಸ್ತರಣೆಯಾಗಲಿದೆ.








