ಬೆಂಗಳೂರು : ಸರ್ಕಾರ ನಿಯಮಿತವಾಗಿ ಕಾಲಕಾಲಕ್ಕೆ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಎಂದು ಇತ್ತೀಚಿಗೆ ಉದ್ಯೋಗ ಆಕಾಂಕ್ಷಿಗಳು ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಆದರೆ ಇದೀಗ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಹೌದು ಕರ್ನಾಟಕ ಲೋಕಸೇವಾ ಆಯೋಗ ವಿವಾದದ ಸುಳಿಯಲ್ಲಿ ಸಿಲುಕಿದ್ದು, ಗೆಜೆಟೆಡ್ ಪ್ರೊಬೆಷನರ್ ಹುದ್ದೆಯಲ್ಲಿ ಗೋಲ್ಮಾಲ್ ನಡೆದಿದೆ. ಒಂದೇ ಕೊಠಡಿಯಲ್ಲಿ ಮುಖ್ಯ ಪರೀಕ್ಷೆ ಬರೆದ 15 ಮಂದಿ ಆಯ್ಕೆಯಾಗಿದ್ದಾರೆ. ಒಂದೇ ಕುಟುಂಬದ ಹಲವರು ಆಯ್ಕೆ ಆಗಿರುವ ಆರೋಪ ಕೇಳಿ ಬರುತ್ತಿದೆ. ಕೆಪಿಎಸ್ಸಿ ವಿರುದ್ಧ ಪರೀಕ್ಷ ಬರೆದ ಹಲವು ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ. ಕೆಪಿಎಸ್ಸಿ ಫಲಿತಾಂಶದ ವಿರುದ್ಧ ಅಭ್ಯರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ. ಮುಖ್ಯ ಪರೀಕ್ಷೆ ಬರೆದು ಸಂದರ್ಶನಕ್ಕೆ ಆಯ್ಕೆಯಾದ ಆರೋಪ ಕೇಳಿ ಬಂದಿದೆ.
ಪ್ರಭಾವಿಗಳ ಮಕ್ಕಳಿಗೆ ಬುದ್ಧಿ ಕೊಡಿಸಲು ಕುತಂತ್ರ ನಡೆದಿದೆ ಎಂದು ಆರೋಪ ಕೇಳಿಬಂದಿದೆ. ಸೀರಿಯಲ್ ನಂಬರ್ ಸಾಲಾಗಿ ಸೆಲೆಕ್ಟ್ ಆಗಿದ್ದು ಹೇಗೆ? ಅಲ್ಲದೆ ಒಂದೇ ಪರೀಕ್ಷಾ ಕೇಂದ್ರದಿಂದ 15 ಮಂದಿ ಆಯ್ಕೆಯಾಗಿದ್ದಾರೆ. ರಿಜಿಸ್ಟರ್ ನಂಬರ್ 250004809, 250004810, 250004811, 250004812 ಈ ರೀತಿಯಾಗಿ ಸೀರಿಯಲ್ ರಿಜಿಸ್ಟರ್ ನಂಬರ್ ಗಳಿವೆ . ಇದೀಗ ಕೆಪಿಎಸ್ಸಿ ಫಲಿತಾಂಶ ಚರ್ಚೆಗೆ ಗ್ರಾಸವಾಗಿದೆ. ಕೆ ಪಿ ಎಸ್ ಸಿ ವಿರುದ್ಧ ಸಿಬಿಐ ತನಿಖೆಗೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ ಪ್ರಾಮಾಣಿಕವಾಗಿ ಓದಿದವರು ಕೆಲಸ ಸಿಗಬೇಕು ಹಾಗಾಗಿ ಒಂದು ತಂಡ ರಚಿಸಿ ತನಿಖೆ ನಡೆಸಿ ಎಂದು ಆಗ್ರಹಿಸಿದ್ದಾರೆ.
ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಅಧ್ಯಕ್ಷ ಕಾಂತ ಕುಮಾರ್ ನೀಡಿರುವ ಮಾಹಿತಿಯಂತೆ, ಈ ಬಾರಿ ಪರೀಕ್ಷಾ ಫಲಿತಾಂಶದಲ್ಲಿ ಅಸಹಜ ಬೆಳವಣಿಗೆಗಳು ಕಂಡುಬಂದಿವೆ. ಸಾಮಾನ್ಯವಾಗಿ ಪರೀಕ್ಷೆಯಲ್ಲಿ 1:15 ಅಥವಾ 1:3 ಅನುಪಾತದಲ್ಲಿ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಆದರೆ, ಈ ಬಾರಿ ಒಂದೇ ಪರೀಕ್ಷಾ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದ ಸರಣಿ ಸಂಖ್ಯೆಯ (Serial Number) ಸುಮಾರು 15 ರಿಂದ 20 ಅಭ್ಯರ್ಥಿಗಳು ಒಟ್ಟಾಗಿ ಪಾಸಾಗಿರುವುದು ದೊಡ್ಡ ಮಟ್ಟದ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇಷ್ಟೇ ಅಲ್ಲದೆ, ಒಂದೇ ಕುಟುಂಬದ ಇಬ್ಬರು ಅಥವಾ ಮೂವರು ಸದಸ್ಯರು ಒಟ್ಟಾಗಿ ಆಯ್ಕೆಯಾಗಿರುವುದು ಕೂಡ ಭ್ರಷ್ಟಾಚಾರದ ಸಂಶಯವನ್ನು ಬಲಪಡಿಸಿದೆ. “ಹಿಂದೆಂದೂ ಕಾಣದ ಇಂತಹ ಆಶ್ಚರ್ಯಕರ ಫಲಿತಾಂಶ ಕೆಪಿಎಸ್‌ಸಿಯಲ್ಲಿ ಹೇಗೆ ಸಾಧ್ಯ?” ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ.
ಸಿಬಿಐ ತನಿಖೆಗೆ ಆಗ್ರಹ: ಈ ಹಗರಣದ ಹಿಂದೆ ಪ್ರಭಾವಿ ರಾಜಕಾರಣಿಗಳು, ಐಎಎಸ್ ಅಧಿಕಾರಿಗಳು ಮತ್ತು ಕೆಪಿಎಸ್‌ಸಿ ಸದಸ್ಯರ ಹಸ್ತಕ್ಷೇಪವಿದೆ ಎಂದು ಕಾಂತ ಕುಮಾರ್ ಆರೋಪಿಸಿದ್ದಾರೆ. “ರಾಜ್ಯದ ಯಾವುದೇ ತನಿಖಾ ಸಂಸ್ಥೆಯಿಂದ ನ್ಯಾಯ ಸಿಗುವುದು ಕಷ್ಟ. ಆದ್ದರಿಂದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಅಥವಾ ಈ ಪ್ರಕರಣವನ್ನು ಸಿಬಿಐಗೆ (CBI) ವಹಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ. ಪ್ರಾಮಾಣಿಕವಾಗಿ ಓದಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು ಎಂಬುದು ಇವರ ಪ್ರಮುಖ ಆಗ್ರಹವಾಗಿದೆ.
ಯುಪಿಎಸ್‌ಸಿ ಮಾದರಿ ಪರೀಕ್ಷೆಗೆ ಒತ್ತಾಯ: ಕೆಪಿಎಸ್‌ಸಿಯಲ್ಲಿ ಪದೇ ಪದೇ ಇಂತಹ ಹಗರಣಗಳು ನಡೆಯುತ್ತಿರುವುದರಿಂದ, ಕರ್ನಾಟಕದ ಉನ್ನತ ಹುದ್ದೆಗಳ ನೇಮಕಾತಿಯನ್ನು ಯುಪಿಎಸ್‌ಸಿ (UPSC) ಮೂಲಕವೇ ನಡೆಸಲಿ ಎಂಬ ಸಲಹೆಯನ್ನು ವಿದ್ಯಾರ್ಥಿ ಸಂಘಟನೆಗಳು ನೀಡುತ್ತಿವೆ. ಈ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂಬುದು ಅವರ ಆಶಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಮಧ್ಯಪ್ರವೇಶಿಸಿ, ಹಗರಣದ ಆಳವನ್ನು ಪತ್ತೆಹಚ್ಚಿ ಬಡ ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಇಡೀ ರಾಜ್ಯದ ಉದ್ಯೋಗಾಕಾಂಕ್ಷಿಗಳು ಕಾಯುತ್ತಿದ್ದಾರೆ.








