ಬೆಂಗಳೂರು : ಅಧಿಕಾರ ಹಂಚಿಕೆಯ ವಿಚಾರವಾಗಿ ಬಜೆಟ್ ನಂತರ ಕ್ರಾಂತಿ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾನು ಯಾಕೆ ಕ್ರಾಂತಿ ಮಾಡಲಿ?. ನನಗೆ ನನ್ನ ಮೇಲೆ ನಂಬಿಕೆ ಇದೆ. ನಾನು ಭರವಸೆ ಮೇಲೆ ಬದುಕುತ್ತೇನೆ. ನಾನು ಪ್ರಯತ್ನ ಮಾಡುವ ಅಗತ್ಯವಿಲ್ಲ. ನನಗೆ ಯಾವಾಗ ಯಾವುದು ಬರಬೇಕೋ ಅದು ಬರುತ್ತದೆ. ಆ ಆತ್ಮವಿಶ್ವಾಸ ನನಗಿದೆ. ಸದ್ಯದಲ್ಲೇ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
ನಾನು ಇದುವರೆಗೂ ಸಿಎಂ ವಿಚಾರವಾಗಿ ಮಾತನಾಡಿಲ್ಲ. ನನ್ನ ವಿಚಾರದಲ್ಲಿ ನಾನುಂಟು, ಸಿಎಂ ಉಂಟು, ಪಕ್ಷದ ಹೈಕಮಾಂಡ್ ಉಂಟು. ಕೆಲವು ನಿರ್ಧಾರ ಕೈಗೊಂಡಾಗ ನಾನು ಭಾಗಿಯಾಗಿದ್ದೆ ಎಂದು ಹೇಳಿರುವುದನ್ನು ಬಿಟ್ಟು ಉಳಿದಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಸಿಎಂ ಹುದ್ದೆ ಖಾಲಿಯಾಗುತ್ತದೆ. ಸಿಎಂ ಹುದ್ದೆಯಿಂದ ಇಳಿಯುತ್ತಾರೆ. ದಲಿತರಿಗೆ ಸಿಎಂ ಹುದ್ದೆ ಸಿಗಬೇಕು, ಬೇರೆಯವರಿಗೆ ಸಿಗಬೇಕು ಎಂದು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಸ್ಟ್ರೀಟ್ ಫೈಟರ್. ಹೇಗೆ ಹೋರಾಟ ಮಾಡಬೇಕೆಂದು ಗೊತ್ತಿದೆ. ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಪಕ್ಷದ ಒಳಗಲ್ಲ. ನನ್ನ ಹೋರಾಟ ಪಕ್ಷದ ಹೊರಗೆ. ನಾನು ಸುಮ್ಮನಾಗಿದ್ದೇನೆಂದು ಭಾವಿಸಿದರೆ ಅದು ಅವರಿಗೆ ಬಿಟ್ಟ ವಿಚಾರ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಎಂ ಹುದ್ದೆ ಖಾಲಿ ಮಾಡಿಸಲು ಹೊರಟಿರುವವರು ಬೇರೆಯವರು. ಅವರು ಮಾತಾಡಿದ್ದಾರೆ. ಸಿಎಂ ಸ್ಥಾನ ಖಾಲಿ ಆದರೆ ಅಲ್ಲವೇ ಬೇರೆಯವರಿಗೆ ನೀಡುವುದು?. ನಾನು ಪಕ್ಷದ ಅಧ್ಯಕ್ಷನಾಗಿ ನನಗೆ ನನ್ನ ಜವಾಬ್ದಾರಿಗಳು ತಿಳಿದಿದೆ. ಈ ಪಕ್ಷಕ್ಕೆ ನನ್ನಿಂದ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು. ನನ್ನಿಂದ ಶಿಸ್ತು ಉಲ್ಲಂಘನೆ ಆಗಬಾರದು. ಅಧ್ಯಕ್ಷ ಸ್ಥಾನದಲ್ಲಿ ಕೂತು, ಆ ಸ್ಥಾನಕ್ಕೆ ಅನ್ಯಾಯ ಮಾಡಬಾರದು.
ನನ್ನಿಂದ ತಪ್ಪಾಗಿದೆ ಎಂದು ಬೇರೆಯವರು ನನ್ನ ಕಡೆ ಬೆರಳು ತೋರಬಾರದು. ನಾನು ಬಹಳ ತಾಳ್ಮೆಯಿಂದ ಇದ್ದೇನೆ. ಏನೆಲ್ಲಾ ಆಗುತ್ತಿದೆ ಎಂದು ನನಗೆ ಅರಿವಿದೆ. ನಾವು ಕಟ್ಟಿ ಬೆಳೆಸಿರುವ ಪಕ್ಷ ಇದು. ನನ್ನಂತೆ ಸುಮಾರು ಲಕ್ಷಾಂತರ ಜನ ಕಾರ್ಯಕರ್ತರಿಗೆ ತೊಂದರೆಯಾಗಬಾರದು. ಅವರೆಲ್ಲಾ ಸೇರಿ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ. ಸ್ವಾರ್ಥಕ್ಕಾಗಿ ನಾನು ಬ್ಲಾಕ್ ಮೇಲೆ ಮಾಡುವುದಿಲ್ಲ. ಪಕ್ಷಕ್ಕೆ ತೊಂದರೆ ಮಾಡುವುದಿಲ್ಲ ಎಂದು ತಿಳಿಸಿದರು.








