ತೆಹ್ರಾನ್: ಇಸ್ರೇಲ್ ಮತ್ತು ಅಮೆರಿಕದ ವಾಯುದಾಳಿಗಳಿಂದ ತತ್ತರಿಸುತ್ತಿರುವ ಇರಾನ್‌ನಲ್ಲಿ ಈಗ ಪ್ರಕೃತಿಯ ವಿಕೋಪವೂ ಸಂಭವಿಸಿದೆ. ಮಂಗಳವಾರ ದಕ್ಷಿಣ ಇರಾನ್‌ನ ಗೆರಾಶ್ (Gerash) ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ.
ಆರಂಭಿಕ ವರದಿಗಳ ಪ್ರಕಾರ, ಈ ಭೂಕಂಪದಿಂದ ಯಾವುದೇ ದೊಡ್ಡ ಮಟ್ಟದ ಆಸ್ತಿಪಾಸ್ತಿ ಹಾನಿ ಅಥವಾ ಪ್ರಾಣಹಾನಿ ಸಂಭವಿಸಿಲ್ಲ. ಕಳೆದ ಶನಿವಾರದಿಂದ ಇಸ್ರೇಲ್ ಮತ್ತು ಅಮೆರಿಕ ಪಡೆಗಳು ಇರಾನ್‌ನ ವಿವಿಧ ಮಿಲಿಟರಿ ನೆಲೆಗಳ ಮೇಲೆ ಸತತ ದಾಳಿ ನಡೆಸುತ್ತಿವೆ. ಈ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಭೂಕಂಪ ಸಂಭವಿಸಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಮಿಲಿಟರಿ ನೆಲೆಗಳ ಮೇಲೆ ದಾಳಿ
ಇತ್ತೀಚಿನ ವಾಯುದಾಳಿಯಲ್ಲಿ ಕೆರ್ಮನ್ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 13 ಇರಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇರಾನ್ ಮೇಲಿನ ಈ ಕಾರ್ಯಾಚರಣೆಯು ಕೆಲವು ವಾರಗಳವರೆಗೆ ಮುಂದುವರಿಯಬಹುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸುಳಿವು ನೀಡಿದ್ದಾರೆ. ಆದರೆ, ಸದ್ಯಕ್ಕೆ ಭೂಸೇನೆಯನ್ನು ಬಳಸುವ ಯಾವುದೇ ಉದ್ದೇಶವಿಲ್ಲ ಎಂದು ಇಸ್ರೇಲ್ ಮಿಲಿಟರಿ ಸ್ಪಷ್ಟಪಡಿಸಿದೆ.








