ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (LAX) ದೊಡ್ಡದೊಂದು ವಿಮಾನ ದುರಂತ ತಪ್ಪಿದೆ. ಇಲ್ಲಿಂದ ಹೊರಟಿದ್ದ ಯುನೈಟೆಡ್ ಏರ್ಲೈನ್ಸ್ ವಿಮಾನದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿಮಾನವನ್ನು ತುರ್ತಾಗಿ ವಾಪಸ್ ಇಳಿಸಲಾಗಿದೆ.
ಯುನೈಟೆಡ್ ಏರ್ಲೈನ್ಸ್ನ ಫ್ಲೈಟ್ 2127 (ಬೋಯಿಂಗ್ 787-9) ವಿಮಾನವು ಬೆಳಿಗ್ಗೆ 10:14ಕ್ಕೆ ನ್ಯೂಜೆರ್ಸಿಗೆ ಹೊರಡಲು ಲಾಸ್ ಏಂಜಲೀಸ್ ನಿಲ್ದಾಣದಿಂದ ಟೇಕ್-ಆಫ್ ಆಗಿತ್ತು. ಆದರೆ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ವಿಮಾನದ ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಬೆಳಿಗ್ಗೆ 11:05ಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತುರ್ತು ಪರಿಸ್ಥಿತಿಯ ಮಾಹಿತಿ ನೀಡಲಾಯಿತು. ವಿಮಾನದಲ್ಲಿ 256 ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 268 ಜನರಿದ್ದರು.ಪೈಲಟ್ಗಳ ಸಮಯಪ್ರಜ್ಞೆಯಿಂದಾಗಿ ಬೆಳಿಗ್ಗೆ 11:29ಕ್ಕೆ ವಿಮಾನವನ್ನು ಸುರಕ್ಷಿತವಾಗಿ ರನ್ವೇ 25ರಲ್ಲಿ ಇಳಿಸಲಾಯಿತು.
ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಪ್ರಯಾಣಿಕರನ್ನು ಸ್ಥಳಾಂತರಿಸಲು ನೆರವಾದರು. “ವಿಮಾನದಲ್ಲಿದ್ದ ಎಲ್ಲರನ್ನೂ ಸ್ಲೈಡ್ಗಳು ಮತ್ತು ಮೆಟ್ಟಿಲುಗಳ ಮೂಲಕ ಕೆಳಗಿಳಿಸಿ, ಬಸ್ಗಳ ಮೂಲಕ ವಿಮಾನ ನಿಲ್ದಾಣದ ಟರ್ಮಿನಲ್ಗೆ ಕರೆದೊಯ್ಯಲಾಗಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ” ಎಂದು ಯುನೈಟೆಡ್ ಏರ್ಲೈನ್ಸ್ ವಕ್ತಾರರು ತಿಳಿಸಿದ್ದಾರೆ.








