ದುಬೈ/ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಮಿಲಿಟರಿ ಸಂಘರ್ಷದ ಪರಿಣಾಮವಾಗಿ ಪಶ್ಚಿಮ ಏಷ್ಯಾದ ವಾಯುಪ್ರದೇಶವನ್ನು (Airspace) ಮುಚ್ಚಲಾಗಿದ್ದು, ಜಾಗತಿಕ ವಿಮಾನಯಾನ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ. ಕಳೆದ ಮೂರು ದಿನಗಳಿಂದ ಸಾವಿರಕ್ಕೂ ಹೆಚ್ಚು ಅಂತರಾಷ್ಟ್ರೀಯ ವಿಮಾನಗಳು ರದ್ದಾಗಿವೆ ಅಥವಾ ಮಾರ್ಗ ಬದಲಿಸಿವೆ.
ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಾದ ದುಬೈ, ದೋಹಾ ಮತ್ತು ಅಬುಧಾಬಿಗಳಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಹತ್ತಾರು ಸಾವಿರ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲೇ ಸಿಲುಕಿಕೊಂಡಿದ್ದಾರೆ.
ಭಾರತೀಯ ವಿಮಾನಗಳ ಮೇಲೆ ಪರಿಣಾಮ
ಭಾರತದ ವಿಮಾನಯಾನ ಸಂಸ್ಥೆಗಳಿಗೂ ಈ ಸಂಘರ್ಷದ ಬಿಸಿ ತಟ್ಟಿದ್ದು, ಸುಮಾರು 300ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ವಿಶೇಷವಾಗಿ ದುಬೈ, ದೋಹಾ ಮತ್ತು ಜಿದ್ದಾಗೆ ಅತಿ ಹೆಚ್ಚು ವಿಮಾನಗಳನ್ನು ಓಡಿಸುವ ಇಂಡಿಗೋ (IndiGo) ಸಂಸ್ಥೆಯು ಅತಿ ಹೆಚ್ಚು ರದ್ದತಿಗಳನ್ನು ದಾಖಲಿಸಿದೆ.
ಪ್ರಮುಖ ವಿಮಾನಯಾನ ಸಂಸ್ಥೆಗಳ ಸ್ಥಿತಿ: ರಾಯಿಟರ್ಸ್ ವರದಿಯ ಪ್ರಕಾರ, ಎಮಿರೇಟ್ಸ್ (Emirates) ಮತ್ತು ಕತಾರ್ ಏರ್ವೇಸ್ (Qatar Airways) ತಲಾ 400ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿವೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೊಂದರಲ್ಲೇ 600ಕ್ಕೂ ಹೆಚ್ಚು ಹೊರಹೋಗುವ ವಿಮಾನಗಳು ಸ್ಥಗಿತಗೊಂಡಿವೆ.
ಸಂಚಾರ ಕಡಿತಗೊಂಡ ಪ್ರಮುಖ ನಗರಗಳು:
ಈ ಯುದ್ಧ ಸದೃಶ ಪರಿಸ್ಥಿತಿಯಿಂದಾಗಿ ಟೆಲ್ ಅವಿವ್, ಬೈರುತ್, ಟೆಹ್ರಾನ್, ದುಬೈ ಮತ್ತು ರಿಯಾದ್ ಸೇರಿದಂತೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಏರ್ಲೈನ್ಸ್ ಸಂಸ್ಥೆಗಳು ಸ್ಥಗಿತಗೊಳಿಸಿವೆ.
“ವಾಯುಪ್ರದೇಶದ ಸುರಕ್ಷತೆಯ ದೃಷ್ಟಿಯಿಂದ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ, ಇದು ಪ್ರಯಾಣದ ಅವಧಿ ಮತ್ತು ಇಂಧನದ ವೆಚ್ಚವನ್ನೂ ಹೆಚ್ಚಿಸುತ್ತಿದೆ.” ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.








