ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ (KSHCOEA) ಮಾಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ಆರೋಗ್ಯ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.
ಮುಷ್ಕರದ ಭಾಗವಾಗಿ ನೌಕರರು ಮಾರ್ಚ್ 11ರಿಂದ ಮಾರ್ಚ್ 15ರವರೆಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಅವಧಿಯಲ್ಲಿ ಹೊರರೋಗಿ (OPD) ಸೇವೆ ನೀಡದೆ, ಕೇವಲ ತುರ್ತು ಸೇವೆಗಳನ್ನು ಮಾತ್ರ ಒದಗಿಸಲು ಸಂಘ ನಿರ್ಧರಿಸಿದೆ. ಮಾರ್ಚ್ 16, ಸೋಮವಾರದಿಂದ ಅನಿರ್ದಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಪೂರ್ಣ ಪ್ರಮಾಣದ ಮುಷ್ಕರ ಆರಂಭಿಸಲಿದ್ದಾರೆ.
NHM ಗುತ್ತಿಗೆ, ಹೊರಗುತ್ತಿಗೆ ನೌಕರರ ಪ್ರಮುಖ ಬೇಡಿಕೆಗಳೇನು?
-
ಖಾಯಂ ನೇಮಕಾತಿ: ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳನ್ನು ಖಾಯಂ ಮಾಡುವ ಪ್ರಕ್ರಿಯೆ ಆರಂಭಿಸಬೇಕು.
-
ಕೆಲಸದಿಂದ ವಜಾ ಮಾಡಬಾರದು: ಯಾವುದೇ ಕಾರಣಕ್ಕೂ ನೌಕರರನ್ನು ಕೆಲಸದಿಂದ ವಜಾ ಮಾಡಬಾರದು ಮತ್ತು ಈಗಾಗಲೇ ವಜಾಗೊಂಡಿರುವ ಸಿಬ್ಬಂದಿಗಳನ್ನು ಮರು ನೇಮಕ ಮಾಡಿಕೊಳ್ಳಬೇಕು.
-
ವೇತನ ಹೆಚ್ಚಳ: ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ವರದಿಯಂತೆ 15% ವೇತನ ಹೆಚ್ಚಳವನ್ನು ಬಾಕಿ ಸಮೇತ ಪಾವತಿಸಬೇಕು.
-
ಸಮಾನ ಕೆಲಸಕ್ಕೆ ಸಮಾನ ವೇತನ: ಸುಪ್ರೀಂ ಕೋರ್ಟ್ ತೀರ್ಪಿನಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು.
-
ಪ್ರತಿ ತಿಂಗಳು ವೇತನ: ಮೂರು ತಿಂಗಳಿಗೊಮ್ಮೆ ವೇತನ ನೀಡುವ ಪದ್ಧತಿ ಕೈಬಿಟ್ಟು, ಪ್ರತಿ ತಿಂಗಳು ವೇತನ ಪಾವತಿಯಾಗುವಂತೆ ಕ್ರಮ ವಹಿಸಬೇಕು.
-
ಗ್ರ್ಯಾಚುಯಿಟಿ: 1972ರ ಕಾಯ್ದೆಯ ಪ್ರಕಾರ ಗುತ್ತಿಗೆ ನೌಕರರಿಗೂ ಗ್ರ್ಯಾಚುಯಿಟಿ ಸೌಲಭ್ಯ ನೀಡಬೇಕು.
ಸಮಸ್ತ ಆರೋಗ್ಯ ಇಲಾಖೆಯ ಅಧಿಕಾರಿಗಳು, ಎನ್‌ಎಚ್‌ಎಂ (NHM) ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಗಳು ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸಂಘಟನೆಯು ಮನವಿ ಮಾಡಿದೆ. ಹೀಗಾಗಿ ಮಾರ್ಚ್.11ರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ಸಿಗೋದು ಡೌಟ್ ಆಗಿದೆ. ಇದಲ್ಲದೇ ಮಾರ್ಚ್.11ರಿಂದಲೇ ವೈದ್ಯರು ಕೂಡ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರೋದರಿಂದ ಸರ್ಕಾರಿ ಆಸ್ಪತ್ರೆಯಲ್ಲಿನ ಓಪಿಡಿ ಸೇವೆ ಸಂಪೂರ್ಣ ವ್ಯತ್ಯಯ ಆಗೋದು ಗ್ಯಾರಂಟಿ ಎಂಬುದಾಗಿ ಹೇಳಲಾಗುತ್ತಿದೆ.

ರಾಜ್ಯ ಸರ್ಕಾರ 13 ಸಭೆ ನಡೆಸಿ ವೈದ್ಯರ ಒಂದೇ ಒಂದು ಬೇಡಿಕೆ ಈಡೇರಿಸಿಲ್ಲ: ಡಾ.ನಾಗೇಂದ್ರಪ್ಪ ಆಕ್ರೋಶ
ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ








