ಸೈನಿಕ ಶಾಲೆಯಲ್ಲಿ ಓದಬೇಕೆಂಬ ಕನಸು ಹೊತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಯ (AISSEE 2026) ಫಲಿತಾಂಶವನ್ನು ಬಿಡುಗಡೆ ಮಾಡಿದೆ.
ಈ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಈಗ ಅಧಿಕೃತ ವೆಬ್ಸೈಟ್ exams.nta.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ಪರೀಕ್ಷೆಯು ಜನವರಿ 18, 2026 ರಂದು ನಡೆದಿತ್ತು. ಫಲಿತಾಂಶ ಪಡೆಯಲು ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ.
ಈ ರೀತಿ ರಿಸಲ್ಟ್ ಚೆಕ್ ಮಾಡಿಕೊಳ್ಳಿ
NTA ಬಿಡುಗಡೆ ಮಾಡಿರುವ ಸ್ಕೋರ್ಕಾರ್ಡ್ ಅನ್ನು ಡೌನ್ಲೋಡ್ ಮಾಡಲು ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
ಹಂತ 1: ಮೊದಲು ಅಧಿಕೃತ ವೆಬ್ಸೈಟ್ exams.nta.nic.in ಗೆ ಭೇಟಿ ನೀಡಿ.
ಹಂತ 2: ವೆಬ್ಸೈಟ್ನ ಮುಖಪುಟದಲ್ಲಿರುವ ‘Candidate Activity’ ವಿಭಾಗದ ಮೇಲೆ ಕ್ಲಿಕ್ ಮಾಡಿ.
ಹಂತ 3: ನಂತರ ‘Score Card for AISSEE – 2026’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 4: ಈಗ ನಿಮ್ಮ ಅಪ್ಲಿಕೇಶನ್ ಸಂಖ್ಯೆ, ಪಾಸ್ವರ್ಡ್ ಮತ್ತು ಸ್ಕ್ರೀನ್ ಮೇಲೆ ಕಾಣುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಲಾಗಿನ್ ಆಗಿ.
ಹಂತ 5: ಲಾಗಿನ್ ವಿವರಗಳನ್ನು ಸಲ್ಲಿಸಿದ ನಂತರ, ನಿಮ್ಮ ಸ್ಕೋರ್ಕಾರ್ಡ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
ಹಂತ 6: ಭವಿಷ್ಯದ ಉಲ್ಲೇಖಕ್ಕಾಗಿ ಸ್ಕೋರ್ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಮುಂದಿನ ಪ್ರಕ್ರಿಯೆ ಏನು?
ಈ ವರ್ಷದ ಪ್ರವೇಶ ಪರೀಕ್ಷೆಯು ಜನವರಿ 18 ರಂದು ದೇಶಾದ್ಯಂತ ಒಟ್ಟು 646 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿತ್ತು. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ಹಂತವಾಗಿ ಇ-ಕೌನ್ಸೆಲಿಂಗ್ (e-Counselling) ಪ್ರಕ್ರಿಯೆ ನಡೆಯಲಿದೆ. ಸೀಟು ಹಂಚಿಕೆ, ಕೆಟಗರಿ (Category) ಮತ್ತು ಅರ್ಹತೆಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುತ್ತದೆ.








