ನವದೆಹಲಿ: ಪ್ರಸ್ತುತ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ (Gold Price Today) ಭಾರಿ ಏರಿಳಿತ ಕಂಡುಬರುತ್ತಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆ (Geo-political tension) ಹೆಚ್ಚಾದಾಗ, ಹೂಡಿಕೆದಾರರು ಷೇರು ಮಾರುಕಟ್ಟೆಗಿಂತಲೂ ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡುತ್ತಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಬೆಲೆ ಎರಡೂ ಗಗನಕ್ಕೇರುತ್ತಿವೆ.
ಸಾಂಸ್ಕೃತಿಕವಾಗಿ ಆಭರಣಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ ಜಾಗತಿಕವಾಗಿ ಚಿನ್ನದ ಒಟ್ಟು ಬಳಕೆಯಲ್ಲಿ ಶೇ. 50ರಷ್ಟು ಪಾಲು ಆಭರಣಗಳದ್ದೇ ಆಗಿದೆ. ಉಳಿದಂತೆ ರಿಟೇಲ್ ಹೂಡಿಕೆ (ಬಾರ್ ಮತ್ತು ಕಾಯಿನ್), ಸರ್ಕಾರಗಳ ಗೋಲ್ಡ್ ರಿಸರ್ವ್ ಮತ್ತು ಕೈಗಾರಿಕಾ ಬಳಕೆಗಾಗಿ ಚಿನ್ನವನ್ನು ಬಳಸಲಾಗುತ್ತದೆ.
ಚೀನಾ ಹಿಂದಿಕ್ಕಿ ಭಾರತ ನಂಬರ್ 1!
ಇನ್ವೆಸ್ಟೋಪೀಡಿಯಾದ 2024ರ ಅಂಕಿಅಂಶಗಳ ಪ್ರಕಾರ, ಭಾರತ ಮತ್ತು ಚೀನಾ ವಿಶ್ವದ ಅತಿದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರಗಳಾಗಿ ಹೊರಹೊಮ್ಮಿವೆ. ಆಶ್ಚರ್ಯಕರ ಸಂಗತಿಯೆಂದರೆ, ಭಾರತವು ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಅಲಂಕರಿಸಿದೆ.
ವಿಶ್ವದ ಟಾಪ್ 10 ಚಿನ್ನದ ಗ್ರಾಹಕ ರಾಷ್ಟ್ರಗಳ ಪಟ್ಟಿ (2024):
ಭಾರತದಲ್ಲಿ ಬದಲಾದ ಹೂಡಿಕೆ ಟ್ರೆಂಡ್
ಭಾರತವು ತನ್ನ ಚಿನ್ನದ ಬೇಡಿಕೆಯನ್ನು ಪೂರೈಸಲು ಬೃಹತ್ ಪ್ರಮಾಣದಲ್ಲಿ ಆಮದಿನ ಮೇಲೆ ಅವಲಂಬಿತವಾಗಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ (WGC) ವರದಿಯ ಪ್ರಕಾರ, ನಿರಂತರ ಬೆಲೆ ಏರಿಕೆಯ ಕಾರಣದಿಂದಾಗಿ 2025ರಲ್ಲಿ ಭಾರತದ ಒಟ್ಟು ಚಿನ್ನದ ಬಳಕೆಯಲ್ಲಿ ಶೇ. 11ರಷ್ಟು ಕುಸಿತ ಕಂಡುಬಂದಿದೆ.
ಆದರೆ, ಕುತೂಹಲಕಾರಿ ವಿಷಯವೆಂದರೆ ಚಿನ್ನದ ನಾಣ್ಯ ಮತ್ತು ಬಾರ್ಗಳ ಮೇಲಿನ ಹೂಡಿಕೆ ಶೇ. 17ರಷ್ಟು ಹೆಚ್ಚಾಗಿದೆ. ಜಾಗತಿಕ ಅನಿಶ್ಚಿತತೆಯ ನಡುವೆ ಜನರು ಆಭರಣಗಳಿಗಿಂತಲೂ ಹೂಡಿಕೆಯ ರೂಪದಲ್ಲಿ ಚಿನ್ನವನ್ನು ಖರೀದಿಸಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಕಳೆದ ವರ್ಷ ಭಾರತೀಯರು ಒಟ್ಟು 710.9 ಟನ್ ಚಿನ್ನ ಖರೀದಿಸಿದ್ದು, ಅದರಲ್ಲಿ 280.4 ಟನ್ ಕೇವಲ ನಾಣ್ಯ ಮತ್ತು ಬಾರ್ಗಳ ರೂಪದಲ್ಲಿದೆ.
ಜಾಗತಿಕವಾಗಿ ದಾಖಲೆ ಬರೆದ ಬೇಡಿಕೆ
ವಿಶ್ವದಾದ್ಯಂತ ಚಿನ್ನದ ವಾರ್ಷಿಕ ಬೇಡಿಕೆಯು ಇದೇ ಮೊದಲ ಬಾರಿಗೆ 5,000 ಟನ್ ಗಡಿಯನ್ನು ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೇಡಿಕೆಯು ಶೇ. 1ರಷ್ಟು ಏರಿಕೆಯಾಗಿ 5,002 ಟನ್ಗಳಿಗೆ ತಲುಪಿದೆ. ಆಭರಣಗಳ ಮಾರಾಟದಲ್ಲಿ ಸ್ವಲ್ಪ ಇಳಿಕೆಯಾಗಿದ್ದರೂ, ಹೂಡಿಕೆ ಚಟುವಟಿಕೆಗಳು ಹೆಚ್ಚಾಗಿರುವುದು ಈ ದಾಖಲೆಗೆ ಪ್ರಮುಖ ಕಾರಣವಾಗಿದೆ.








