ಸಾಮಾನ್ಯವಾಗಿ ಕಾರಿನ ಮೇಲೆ ಗೀರುಗಳು (Scratches) ಅಥವಾ ಸಣ್ಣಪುಟ್ಟ ಗುಳಿಗಳು (Dents) ಬಿದ್ದರೆ ಕಾರಿನ ಅಂದವೇ ಕೆಡುತ್ತದೆ. ಅಂತಹ ಸಂದರ್ಭದಲ್ಲಿ ಆ ಗೀರುಗಳನ್ನು ಹೋಗಲಾಡಿಸಲು ನಾವು ಹರಸಾಹಸ ಪಡಬೇಕಾಗುತ್ತದೆ. ಮೊದಲಿಗೆ ಗ್ಯಾರೇಜ್ ಅಥವಾ ಕಾರ್ ಶೆಡ್‌ಗೆ ಅಲೆದಾಡಬೇಕಾಗುತ್ತದೆ, ಜೊತೆಗೆ ಜೇಬಿಗೆ ಕತ್ತರಿ ಬೀಳುವುದು ಖಚಿತ.
ಆದರೆ ಇನ್ನು ಮುಂದೆ ಇಂತಹ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಟ್ರಾಫಿಕ್ ಅಥವಾ ಪಾರ್ಕಿಂಗ್ ಜಾಗಗಳಲ್ಲಿ ಆಗುವ ಸಣ್ಣ ಗೀರುಗಳನ್ನು ಮನೆಯಲ್ಲೇ ಸುಲಭವಾಗಿ ಸರಿಪಡಿಸಬಹುದು. ಅದಕ್ಕಾಗಿ ಈ ಕೆಳಗಿನ ಟ್ರಿಕ್ಸ್ ಫಾಲೋ ಮಾಡಿ:
ಮೊದಲು ಆ ಭಾಗವನ್ನು ಸ್ವಚ್ಛಗೊಳಿಸಿ
ಯಾವುದೇ ಪ್ರಯೋಗ ಮಾಡುವ ಮೊದಲು, ಗೀರು ಬಿದ್ದಿರುವ ಜಾಗವನ್ನು ಕಾರ್ ಶಾಂಪೂ ಮತ್ತು ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಮೃದುವಾದ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ ಒಣಗಿಸಿ. ಮೇಲ್ಮೈ ಸ್ವಚ್ಛವಾಗಿದ್ದರೆ ಮಾತ್ರ ಗೀರು ಎಷ್ಟು ಆಳವಾಗಿದೆ ಎಂಬುದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.
ಸ್ಕ್ರ್ಯಾಚ್ ರಿಮೂವರ್ ಬಳಸಿ
ಒಂದು ವೇಳೆ ಗೀರು ತುಂಬಾ ಮೇಲ್ಮಟ್ಟದಲ್ಲಿದ್ದರೆ (ಪೆಿಯಂಟ್‌ನ ಆಳಕ್ಕೆ ಹೋಗದಿದ್ದರೆ), ಮಾರುಕಟ್ಟೆಯಲ್ಲಿ ಸಿಗುವ ಸ್ಕ್ರ್ಯಾಚ್ ರಿಮೂವರ್ ಅಥವಾ ರಬ್ಬಿಂಗ್ ಕಾಂಪೌಂಡ್ ಬಳಸಬಹುದು. ಸ್ವಲ್ಪ ಪ್ರಮಾಣದ ಕಾಂಪೌಂಡ್ ಅನ್ನು ಮೃದುವಾದ ಬಟ್ಟೆಗೆ ಹಚ್ಚಿ, ವೃತ್ತಾಕಾರವಾಗಿ ನಿಧಾನವಾಗಿ ಉಜ್ಜಿದರೆ ಗೀರುಗಳು ಮಾಯವಾಗುತ್ತವೆ.
ಟಚ್-ಅಪ್ ಪೇಂಟ್ ಪ್ರಯತ್ನಿಸಿ
ಗೀರು ಪೇಂಟ್ ಪದರವನ್ನು ಮೀರಿ ಆಳಕ್ಕೆ ಹೋಗಿದ್ದರೆ, ನಿಮ್ಮ ಕಾರಿನ ಬಣ್ಣಕ್ಕೆ ಹೊಂದುವ ಟಚ್-ಅಪ್ ಪೇಂಟ್ ಬಳಸಿ. ಕಾರಿನ ಕಲರ್ ಕೋಡ್ ತಿಳಿದುಕೊಂಡು, ಸಣ್ಣ ಬ್ರಷ್ ಸಹಾಯದಿಂದ ಪೇಂಟ್ ಹಚ್ಚಿ ಒಣಗಲು ಬಿಡಿ. ನಂತರ ಅದನ್ನು ಲಘುವಾಗಿ ಪಾಲಿಶ್ ಮಾಡಿದರೆ ವ್ಯತ್ಯಾಸ ತಿಳಿಯುವುದಿಲ್ಲ.
ಪ್ಲಾಸ್ಟಿಕ್ ಬಂಪರ್‌ಗಳಿಗೆ ಬಿಸಿ ನೀರು!
ಪ್ಲಾಸ್ಟಿಕ್ ಬಂಪರ್ ಮೇಲೆ ಸಣ್ಣ ಡೆಂಟ್ ಆಗಿದ್ದರೆ, ಅದರ ಮೇಲೆ ಬಿಸಿ ನೀರನ್ನು ಸುರಿಯಿರಿ. ಬಿಸಿಗೆ ಪ್ಲಾಸ್ಟಿಕ್ ಮೃದುವಾಗುತ್ತದೆ. ಆ ಸಮಯದಲ್ಲಿ ಹಿಂದಿನಿಂದ ಲಘುವಾಗಿ ಒತ್ತಿದರೆ ಬಂಪರ್ ತನ್ನ ಹಳೆಯ ಆಕಾರಕ್ಕೆ ಮರಳುತ್ತದೆ. ನೆನಪಿಡಿ, ಇದು ಕೇವಲ ಪ್ಲಾಸ್ಟಿಕ್ ಭಾಗಗಳಿಗೆ ಮತ್ತು ಸಣ್ಣ ಡೆಂಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ.
ಡೆಂಟ್ ಪುಲ್ಲರ್ (Dent Puller) ಬಳಕೆ
ಸಣ್ಣ ಮತ್ತು ಅಗಲವಾದ ಡೆಂಟ್‌ಗಳಿಗಾಗಿ ನೀವು ಸಕ್ಷನ್ ಡೆಂಟ್ ಪುಲ್ಲರ್ ಉಪಕರಣವನ್ನು ಬಳಸಬಹುದು. ಇದನ್ನು ಡೆಂಟ್ ಇರುವ ಜಾಗದಲ್ಲಿ ಗಟ್ಟಿಯಾಗಿ ಅಂಟಿಸಿ ನಿಧಾನವಾಗಿ ಎಳೆಯಿರಿ. ಆದರೆ ತುಂಬಾ ಆಳವಾದ ಅಥವಾ ಚೂಪಾದ ಡೆಂಟ್‌ಗಳ ಮೇಲೆ ಇದನ್ನು ಬಳಸಬೇಡಿ, ಇದು ಹಾನಿಯನ್ನು ಹೆಚ್ಚಿಸಬಹುದು.








