ಬೆಂಗಳೂರು: ಪಾಸ್ಪೋರ್ಟ್ ಪೊಲೀಸ್ ಪರಿಶೀಲನೆ (Passport Verification) ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಈ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಪಾಸ್ಪೋರ್ಟ್ ಪರಿಶೀಲನೆಗಾಗಿ ಅರ್ಜಿದಾರರನ್ನು ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ಕರೆಯಿಸುವಂತಿಲ್ಲ. ಬದಲಾಗಿ ಅಧಿಕಾರಿಗಳೇ ಅರ್ಜಿದಾರರ ಮನೆಗೆ ಭೇಟಿ ನೀಡಬೇಕು.
ಹೊಸ ಮಾರ್ಗಸೂಚಿಗಳ ಮುಖ್ಯಾಂಶಗಳು:
ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ಪೋರ್ಟ್ ಪರಿಶೀಲನೆಗೆ ತೆರಳುವ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ/ಸಿಬ್ಬಂದಿ ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾ (Body-worn camera) ಧರಿಸಿರಬೇಕು. ಪರಿಶೀಲನೆಯ ಆರಂಭದಿಂದ ಅಂತ್ಯದವರೆಗೆ ಸಂಪೂರ್ಣ ಪ್ರಕ್ರಿಯೆ ಇದರಲ್ಲಿ ದಾಖಲಾಗಬೇಕು.
ಠಾಣೆಗೆ ಕರೆಸುವಂತಿಲ್ಲ: ಅರ್ಜಿದಾರರನ್ನು ಠಾಣೆಗೆ ಬರುವಂತೆ ಒತ್ತಾಯಿಸುವಂತಿಲ್ಲ ಅಥವಾ ಅನಗತ್ಯವಾಗಿ ಅಲೆದಾಡಿಸುವಂತಿಲ್ಲ.
ಪೂರ್ವ ಮಾಹಿತಿ ನೀಡುವುದು: ಅಧಿಕಾರಿಯು ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮೊದಲು ಎಸ್ಎಂಎಸ್ ಅಥವಾ ಕರೆ ಮೂಲಕ ಮಾಹಿತಿ ನೀಡಬೇಕು.
ಕಿರುಕುಳಕ್ಕೆ ಬ್ರೇಕ್: ಅರ್ಜಿದಾರರಿಂದ ಯಾವುದೇ ರೀತಿಯ ಆಮಿಷ ಅಥವಾ ಲಂಚ ನಿರೀಕ್ಷಿಸುವಂತಿಲ್ಲ. ದಾಖಲೆಗಳ ಕೊರತೆಯಿದ್ದಲ್ಲಿ ಅಥವಾ ಪ್ರತಿಕೂಲ ವರದಿ (Adverse report) ನೀಡುವ ಸಂದರ್ಭದಲ್ಲಿ ಸ್ಪಷ್ಟವಾದ ಪುರಾವೆಗಳು ಇರಲೇಬೇಕು.
ನೆರೆಹೊರೆಯವರ ವಿಚಾರಣೆ: ಅಧಿಕಾರಿಗಳು ಕಡ್ಡಾಯವಾಗಿ ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳು ಅಥವಾ ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸಿ ಪಾರದರ್ಶಕವಾಗಿ ವರದಿ ಸಲ್ಲಿಸಬೇಕು.
ವೇಳಾಪಟ್ಟಿ ಮತ್ತು ನಿಗಾ:
ಈ ನಿಯಮಗಳ ಪಾಲನೆಯ ಬಗ್ಗೆ ಎಲ್ಲಾ ವಿಭಾಗದ ಉಪ ಪೊಲೀಸ್ ಆಯುಕ್ತರು (DCP) ವೈಯಕ್ತಿಕವಾಗಿ ನಿಗಾ ವಹಿಸಲಿದ್ದಾರೆ. ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಈ ಹೊಸ ಕ್ರಮದಿಂದಾಗಿ ಪಾಸ್ಪೋರ್ಟ್ ಪಡೆಯುವ ಪ್ರಕ್ರಿಯೆ ಮತ್ತಷ್ಟು ಸುಗಮವಾಗಲಿದ್ದು, ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಸಂಪರ್ಕ ಹೆಚ್ಚು ಪಾರದರ್ಶಕವಾಗುವ ನಿರೀಕ್ಷೆಯಿದೆ.









