ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ ಹ್ಯಾಕಿಂಗ್ ಎಂಬುದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹ್ಯಾಕರ್ಗಳು ದಿನಕ್ಕೊಂದು ಹೊಸ ದಾರಿಯ ಮೂಲಕ ಜನಸಾಮಾನ್ಯರ ಹಣಕ್ಕೆ ಕನ್ನ ಹಾಕುತ್ತಿದ್ದಾರೆ. ಇಂಟರ್ನೆಟ್ ಅಥವಾ ಬಗ್ಗಳ ಮೂಲಕ ಹ್ಯಾಕ್ ಮಾಡುವುದು ಹಳೆಯದಾಯಿತು, ಈಗ ‘ಕಾಲ್ ಫಾರ್ವರ್ಡಿಂಗ್’ (Call Forwarding) ಮೂಲಕ ಸುಲಭವಾಗಿ ಹ್ಯಾಕ್ ಮಾಡಲಾಗುತ್ತಿದೆ.
ಹ್ಯಾಕರ್ ಗಳ ಹೊಸ ಪ್ಲಾನ್ ಹೀಗಿದೆ:
ಸೈಬರ್ ಅಪರಾಧಿಗಳು ನಿಮಗೆ ಒಂದು ಮೆಸೇಜ್ ಅಥವಾ ಕಾಲ್ ಮಾಡುತ್ತಾರೆ. “ನಿಮ್ಮ ಕೊರಿಯರ್ ಬಂದಿದೆ”, “ನಿಮಗೊಂದು ಉಡುಗೊರೆ ಕಾಯುತ್ತಿದೆ” ಅಥವಾ “ಡೆಲಿವರಿ ಬಾಯ್ಗೆ ಅಡ್ರೆಸ್ ತಿಳಿಯುತ್ತಿಲ್ಲ, ಈ ನಂಬರ್ಗೆ ಕಾಲ್ ಮಾಡಿ” ಎಂದು ನಂಬಿಸುತ್ತಾರೆ. ಅವರು ನೀಡಿದ ನಂಬರ್ಗೆ ನೀವು ಕರೆ ಮಾಡಿದ ತಕ್ಷಣ, ನಿಮ್ಮ ಫೋನಿನ ಕಾಲ್ ಮತ್ತು ಮೆಸೇಜ್ಗಳು ಹ್ಯಾಕರ್ ನಂಬರ್ಗೆ ಫಾರ್ವರ್ಡ್ ಆಗುತ್ತವೆ.
ಇದರಿಂದ ನಿಮ್ಮ ಬ್ಯಾಂಕ್ OTPಗಳು ಮತ್ತು ವೈಯಕ್ತಿಕ ಕರೆಗಳು ಅವರಿಗೆ ತಲುಪುತ್ತವೆ. ಅಷ್ಟೇ ಅಲ್ಲದೆ, ನಿಮ್ಮ ವಾಟ್ಸಾಪ್ ಕೂಡ ಅವರ ವಶವಾಗುವ ಸಾಧ್ಯತೆ ಇರುತ್ತದೆ.
ಹ್ಯಾಕ್ ಆಗಿದೆಯೇ ಎಂದು ಪರೀಕ್ಷಿಸುವುದು ಹೇಗೆ?
ನಿಮ್ಮ ಫೋನ್ ಸುರಕ್ಷಿತವಾಗಿದೆಯೇ ಎಂದು ತಿಳಿಯಲು ಕೇವಲ ಎರಡು ಸೆಕೆಂಡ್ ಸಾಕು. ನಿಮ್ಮ ಮೊಬೈಲ್ನ ಡಯಲ್ ಪ್ಯಾಡ್ ತೆರೆದು ಈ ಕೆಳಗಿನ ಕೋಡ್ ಒತ್ತಿರಿ:
ಕೋಡ್: *#21#
ಈ ನಂಬರ್ಗೆ ಕರೆ ಮಾಡಿದ ಕೂಡಲೇ ನಿಮ್ಮ ಸ್ಕ್ರೀನ್ ಮೇಲೆ ಒಂದು ಪಟ್ಟಿ ಕಾಣಿಸುತ್ತದೆ. ಅದರಲ್ಲಿ ಕಾಲ್ ಫಾರ್ವರ್ಡಿಂಗ್, ಮೆಸೇಜ್, ವಾಯ್ಸ್ ಇತ್ಯಾದಿಗಳ ಮುಂದೆ ‘Disabled’ ಅಥವಾ ‘Not Forwarded’ ಎಂದು ಇರಬೇಕು. ಒಂದು ವೇಳೆ ಅಲ್ಲಿ ಯಾವುದಾದರೂ ನಂಬರ್ ಕಾಣಿಸಿದರೆ ಅಥವಾ ‘Enabled’ ಎಂದು ಇದ್ದರೆ, ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದರ್ಥ.
ಹ್ಯಾಕ್ ಆಗಿದ್ದರೆ ಏನು ಮಾಡಬೇಕು?
ಒಂದು ವೇಳೆ ನಿಮ್ಮ ಕರೆಗಳು ಫಾರ್ವರ್ಡ್ ಆಗುತ್ತಿದ್ದರೆ ಗಾಬರಿಪಡುವ ಅಗತ್ಯವಿಲ್ಲ. ಅದನ್ನು ತಡೆಯಲು ಈ ಕೆಳಗಿನ ಕೋಡ್ ಅನ್ನು ತಕ್ಷಣವೇ ಡಯಲ್ ಮಾಡಿ:
ಕೋಡ್: ##002#
ಈ ಕೋಡ್ ಡಯಲ್ ಮಾಡಿದ ತಕ್ಷಣ ನಿಮ್ಮ ಫೋನ್ನಿಂದ ಬೇರೆ ನಂಬರ್ಗೆ ಹೋಗುತ್ತಿದ್ದ ಎಲ್ಲಾ ಕಾಲ್ ಫಾರ್ವರ್ಡಿಂಗ್ ಸೌಲಭ್ಯಗಳು ರದ್ದಾಗುತ್ತವೆ. ಒಂದು ವೇಳೆ ನಿಮ್ಮ ವಾಟ್ಸಾಪ್ ಹ್ಯಾಕ್ ಆಗಿದ್ದರೆ, ಈ ಪ್ರಕ್ರಿಯೆಯ ನಂತರ ಮತ್ತೊಮ್ಮೆ ಲಾಗಿನ್ ಆಗಿ ಹೊಸ OTP ಪಡೆಯುವ ಮೂಲಕ ನಿಮ್ಮ ಖಾತೆಯನ್ನು ಮರಳಿ ಪಡೆಯಬಹುದು.
ನೆನಪಿಡಿ: ಅಪರಿಚಿತರು ಕಳುಹಿಸುವ ಲಿಂಕ್ ಅಥವಾ ನಂಬರ್ಗಳ ಬಗ್ಗೆ ಎಚ್ಚರವಿರಲಿ. ಈ ಸಣ್ಣ ಟ್ರಿಕ್ ಬಳಸುವ ಮೂಲಕ ನೀವು ಶೇ. 80ರಷ್ಟು ಸೈಬರ್ ಅಪರಾಧಗಳಿಂದ ಪಾರಾಗಬಹುದು.








