ಹಾಸನ : ಹುದ್ದೆ ಮತ್ತು ಪಕ್ಷದ ಸಿದ್ಧಾಂತಗಳ ನಡುವೆ ವೈಯಕ್ತಿಕ ಸ್ನೇಹ ಅಥವಾ ರಾಜಕೀಯ ಸೌಜನ್ಯ ಸಹಜವಾಗಿದ್ದರೂ, ಪ್ರೀತಂ ಗೌಡ ಅವರು ಕಾಂಗ್ರೆಸ್ ಮುಖಂಡರೊಂದಿಗೆ ಕಾಣಿಸಿಕೊಂಡಾಗಲೆಲ್ಲಾ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡುತ್ತದೆ.
ಹೌದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಹಾಸನ ಕ್ಷೇತ್ರದ ಮಾಜಿ ಶಾಸಕರಾಗಿರುವ ಪ್ರೀತಂಗೌಡ ಅವರು ಕಾಂಗ್ರೆಸ್ ಮುಖಂಡರೊಂದಿಗೆ ಕಾಣಿಸಿಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ. ಮೈಸೂರಿನ ಪ್ರತಿಷ್ಠಿತ ಹೋಟೆಲ್ ಲಲಿತ್ ಮಹಲ್ ಇಂದ ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಹಾಗೂ ಹಾಸನ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜಾವಗಲ್ ಮಂಜುನಾಥ ಜೊತೆಗೆ ಕಾರಿನಲ್ಲಿ ಪ್ರೀತಂ ಗೌಡ ಸಂಚರಿಸಿದ ವಿಡಿಯೋ ಹರಿದಾಡುತ್ತಿದ್ದು ಈ ಮೂಲಕ ಪ್ರೀತಂ ಗೌಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರ ಎನ್ನುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ರಾಜಕೀಯ ಸೌಜನ್ಯ ಮತ್ತು ಭೇಟಿ : ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಅವರು ಹಾಸನ ಜಿಲ್ಲೆಯ ಪ್ರಭಾವಿ ನಾಯಕರು. ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಥವಾ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಅವರು ಕಾಂಗ್ರೆಸ್ ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡಿದ್ದು ಸುದ್ದಿಯಾಗಿತ್ತು. ಇದನ್ನು ಹಲವರು ‘ರಾಜಕೀಯ ಮತ್ಸರ ಮೀರಿ ಬೆಳೆದ ಸ್ನೇಹ’ ಎಂದು ಬಣ್ಣಿಸಿದರೆ, ಇನ್ನು ಕೆಲವರು ರಾಜಕೀಯ ಲೆಕ್ಕಾಚಾರ ಎಂದು ನೋಡುತ್ತಾರೆ.
ಜೆಡಿಎಸ್ ವಿರುದ್ಧದ ಹೋರಾಟ : ಹಾಸನದಲ್ಲಿ ಜೆಡಿಎಸ್ (ದೇವೇಗೌಡರ ಕುಟುಂಬ) ವಿರುದ್ಧ ಹೋರಾಡುವ ವಿಚಾರದಲ್ಲಿ ಪ್ರೀತಂ ಗೌಡ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರ ನಡುವೆ ಒಂದು ರೀತಿಯ ಅಲಿಖಿತ ಹೊಂದಾಣಿಕೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ದಟ್ಟವಾಗಿದೆ. ಜೆಡಿಎಸ್ ಅನ್ನು ಸೋಲಿಸಲು ಉಭಯ ಪಕ್ಷಗಳ ನಾಯಕರು ಒಂದಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿರುತ್ತವೆ.
ಪಕ್ಷಾಂತರದ ವದಂತಿಗಳು : ಹಿಂದೆ ಹಲವು ಬಾರಿ ಪ್ರೀತಂ ಗೌಡ ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ವಿಶೇಷವಾಗಿ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಅವರ ಆಪ್ತ ನಾಯಕರೊಂದಿಗೆ ಅವರು ಕಾಣಿಸಿಕೊಂಡಾಗ ಈ ಚರ್ಚೆ ಜೋರಾಗುತ್ತದೆ. ಆದರೆ, ಈವರೆಗೂ ಅವರು ಬಿಜೆಪಿಯಲ್ಲೇ ಮುಂದುವರಿಯುತ್ತಿದ್ದಾರೆ.








