ಬೆಂಗಳೂರು: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ವಿಫಲವಾಗಿರುವ ರಾಹುಲ್ ಗಾಂಧಿ ಹೊರಗೆ ದೇಶದ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಆರೋಪಿಸಿದರು.
ನವದೆಹಲಿಯಲ್ಲಿ ನಡೆದ ಜಾಗತಿಕ ಎಐ ಶೃಂಗಸಭೆಗೆ ಅಡ್ಡಿ ಉಂಟು ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿದ್ದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಮೇಣದಬತ್ತಿ ಅಂಟಿಸಿ ನಡೆಸಿದ ಪ್ರತಿಭಟನೆಯ ನೇತೃತ್ವವನ್ನು ಅವರು ವಹಿಸಿ ಮಾತನಾಡಿದರು. ಶನಿವಾರ ಸಂಜೆ ಫ್ರೀಡಂ ಪಾರ್ಕ್ ನಲ್ಲಿ ಈ ಪ್ರತಿಭಟನೆ ನಡೆಯಿತು.
ಅಲ್ಲದೆ, ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿರುವುದರ ವಿರುಧ್ಧವೂ ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಸರಿಯಲ್ಲ, ಅವರು ದೇಶದ ಕೀರ್ತಿಗೆ ಧಕ್ಕೆ ತಂದಿದ್ದಾರೆ. ಇದು ಅಕ್ಷಮ್ಯ ಎಂದು ಅವರು ಕಿಡಿಕಾರಿದರು.
ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಿಗಳು ಹಾಗೂ ಜಗತ್ತಿನ ಖ್ಯಾತ ಐಟಿ, ಎಐ ಕಂಪನಿಗಳು ಭಾಗಿಯಾಗಿರುವ ಜಾಗತಿಕ ಶೃಂಗಸಭೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬನಿಯನ್ ಬಿಚ್ಚಿ ಅರೆಬೆತ್ತಲಾಗಿ ಪ್ರತಿಭಟನೆ ನಡೆಸಿರುವುದು ಖಂಡನೀಯ. ರಾಹುಲ್ ಗಾಂಧಿ ಅವರು ಉದ್ದೇಶಪೂರ್ವಕವಾಗಿಯೇ ಚಿತಾವಣೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ 140 ಕೋಟಿ ಜನರ ಪ್ರತಿನಿಧಿ. ಈವರೆಗೂ ದೇಶದಲ್ಲಿ ನಡೆದಿರದ ಶೃಂಗಸಭೆ ಅದಾಗಿದೆ. ದೇಶದಲ್ಲಿ ನಶಿಸಿ ಹೋಗುತ್ತಿರುವ ಕಾಂಗ್ರೆಸ್ ಪಕ್ಷ ಇಂತಹ ಕೆಲಸಕ್ಕೆ ಬಾರದ ಪ್ರತಿಭಟನೆಗಳಿಂದ ಇನ್ನಷ್ಟು ಪಾತಾಳಕ್ಕೆ ಕುಸಿಯುತ್ತಿದೆ. ಆ ಪಕ್ಷಕ್ಕೆ ದೇಶದ ಅಭಿವೃದ್ಧಿ ಬೇಕಿಲ್ಲ. ಕ್ಷುಲ್ಲಕ ಕಾರಣಗಳಿಂದ ದೇಶದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತರಿಗೆ ನಿರ್ಬಂಧ; ಸರ್ವಾಧಿಕಾರಿ ಮನೋಭಾವದ ಪರಮಾವಧಿ
ಆಡಳಿತಾರೂಢ ಕಾಂಗ್ರೆಸ್ ವಿಧಸೌಧದಲ್ಲಿ ವರದಿ ಮಾಡುವ ಪತ್ರಕರ್ತರಿಗೆ ನಿರ್ಬಂಧ ವಿಧಿಸಿರುವ ಸರ್ವಾಧಿಕಾರಿ ಮನೋಭಾವ ಆಗಿದೆ. ಕಾಂಗ್ರೆಸ್ ಪಕ್ಷವು ಇನ್ನೂ ತುರ್ತು ಪರಿಸ್ಥಿತಿಯ ಮನಃಸ್ಥಿತಿಯಿಂದ ಹೊರ ಬಂದಿಲ್ಲ ಎಂದು ರಮೇಶ್ ಗೌಡರು ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೆ ಅಂಗವಾಗಿದೆ. ಅದರ ಹೊಣೆಗಾರಿಕೆ ಮಹತ್ವದ್ದು. ಹೀಗಾಗಿ ಕೂಡಲೇ ಈ ನಿರ್ಬಂಧವನ್ನು ತೆಗೆದು ಹಾಕಬೇಕು ಎಂದು ಅವರು ಒತ್ತಾಯ ಮಾಡಿದರು.
ಮಾಜಿ ಶಾಸಕ ಕೆ.ಎನ್. ತಿಪ್ಪೇಸ್ವಾಮಿ ಸೇರಿದಂತೆ ಅನೇಕ ಮುಖಂಡರು, ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.








