ಶಿವಮೊಗ್ಗ : ಗ್ರಾಮೀಣ ಭಾಗದ ಜನರ ಸಾರಿಗೆ ಸಮಸ್ಯೆ ತಕ್ಷಣ ಬಗೆಹರಿಸಬೇಕು. ಒಂದು ಮಾರ್ಗದ ಬಸ್ ಸಂಚಾರ ನಿಲ್ಲಿಸಿದರೆ ಅದನ್ನು ಅವಲಂಬಿಸಿಕೊoಡವರಿಗೆ ಆಗುವ ಸಮಸ್ಯೆಯನ್ನು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ, ಮಾಜಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕೆ.ಎಸ್.ಆರ್.ಟಿ.ಸಿ. ಡಿಪೋ ಎದುರು ಯಡಜಿಗಳೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಿಂದ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಯಡಜಿಗಳೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿದ್ಯಾರ್ಥಿಗಳು, ಗ್ರಾಮಸ್ಥರು, ರೋಗಿಗಳು ಸಾಗರಕ್ಕೆ ಬರುವ ಬಸ್‌ಗಳನ್ನು ಅವಲಂಭಿಸಿಕೊoಡಿದ್ದಾರೆ ಎಂದರು.
ನಾನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷನಾಗಿದ್ದಾಗ ತಾಲ್ಲೂಕಿನ ಬೇರೆಬೇರೆ ಮಾರ್ಗಗಳಿಗೆ ತುರ್ತು ಬಸ್ ಸೌಲಭ್ಯ ಕಲ್ಪಿಸಲು ಸಂಬoಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ತರಲಾಗಿತ್ತು. ಈ ಭಾಗದ 11 ರೂಟ್‌ಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಬಸ್ ಸೌಲಭ್ಯ ನಿಲ್ಲಿಸಲಾಗಿದ್ದು ಜನರು ತೀವೃ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳಿಗೆ ಮೌಖಿಕವಾಗಿ ಸಾಕಷ್ಟು ಬಾರಿ ಮನವಿ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ. ತಕ್ಷಣ ಬಸ್ ಸೌಲಭ್ಯ ಕಲ್ಪಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿದಿನ ಬೆಳಿಗ್ಗೆ 7.45ಕ್ಕೆ ಸಾಗರದಿಂದ ಅಂಬಗಾರಿಗೆ ಬರುತ್ತಿದ್ದ ಬಸ್ ಸೌಲಭ್ಯವನ್ನು ಪುನರಾರಂಭಿಸಬೇಕು. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್‌ಗಳು ಹಿಂದಿನಂತೆ ಪುನರಾರಂಭ ಮಾಡಬೇಕು. ಸರ್ಕಾರ ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರು ಸರ್ಕಾರಿ ಬಸ್ ಸಂಚಾರ ಅವಲಂಭಿಸಿರುತ್ತಾರೆ ಎನ್ನುವುದನ್ನು ಸಂಬoಧಪಟ್ಟವರು ಗಮನಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗಿರೀಶ್ ಹೆಗಡೆ ಹಕ್ರೆ, ರಜನೀಶ್ ಹೆಗಡೆ, ಪ್ರವೀಣ್ ಶೆಟ್ಟಿಸರ, ಅರುಣ ಪೂಜಾರಿ ಹಕ್ರೆ, ಅಕ್ಷಯ ಪೂಜಾರಿ, ಮಹೇಶ್ ರಾಮನಗದ್ದೆ, ಮಂಜುನಾಥ್ ಕೆ.ವಿ., ಗಣಪತಿ, ಸುರೇಶ್ ಇನ್ನಿತರರು ಹಾಜರಿದ್ದರು.
ಮಂಡ್ಯ: ಮಾ.23ರಿಂದ ಏ.5ರವರೆಗೆ ‘ವೈರಮುಡಿ ಬ್ರಹ್ಮೋತ್ಸವ’ ಆಚರಣೆ- ಡಿಸಿ ಡಾ.ಕುಮಾರ








