ಶಿವಮೊಗ್ಗ: ಕೇಂದ್ರ ಸಚಿವ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸಲು ಪಣ ತೊಟ್ಟಿದ್ದು, ಶೀಘ್ರದಲ್ಲೇ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಸೊರಬಕ್ಕೆ ಕರೆತರುವ ಮೂಲಕ ತಾಲ್ಲೂಕಿನಲ್ಲಿ ಯುವಕರನ್ನು ಮತ್ತಷ್ಟು ಪಕ್ಷಕ್ಕೆ ಸೆಳೆಯಲು ಕಾರ್ಯತಂತ್ರ ರೂಪಿಸಲಾಗುವುದು ಎಂದು ಜೆಡಿಎಸ್ ಹಿರಿಯ ಮುಖಂಡ ಬಾಸೂರು ಚಂದ್ರೇಗೌಡ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದಲ್ಲಿ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜವಾಬ್ದಾರಿ ಮರೆತ ರಾಜಕೀಯ ಕ್ಷೇತ್ರದಲ್ಲಿ ರಾಜಕಾರಣವು ಇಂದು ವ್ಯಾಪಾರವಾಗಿ ಬದಲಾಗಿದೆ. ಕಳೆದ 40 ವರ್ಷಗಳಿಂದ ಜನರಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ನಮ್ಮಲ್ಲಿ ಆರ್ಥಿಕ ಶಕ್ತಿ ಇಲ್ಲದಿದ್ದರೂ ಜನರ ಪರವಾಗಿ ಕೆಲಸ ಮಾಡಿದ್ದೇವೆ. ಪಕ್ಷದ ಹಿರಿಯ ಮುಖಂಡರು ಭಿನ್ನಮತ ಮರೆತು ಒಗ್ಗೂಡಿ ಪಕ್ಷ ಸಂಘಟಿಸಬೇಕಿದೆ ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಗಣಪತಿ ಮಾತನಾಡಿ, ಟಿ.ಎನ್.ರಾಮಕೃಷ್ಣ ಅವರು ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ತಾಲ್ಲೂಕು ಜೆಡಿಎಸ್ ವತಿಯಿಂದ ಅಭಿನಂದನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದರು.
ಮುಂಬರುವ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸಮರ್ಥವಾಗಿ ಪಕ್ಷ ಎದುರಿಸಲಿದ್ದು, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ.ಒಮ್ಮತದ ಮೂಲಕ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಬಸವನಗೌಡ ಪಾಟೀಲ್, ಸೊರಬ ಟೌನ್ ಅಧ್ಯಕ್ಷ ಗಣೇಶ್ ಪಿಕಲ್ಸ್, ಚಂದ್ರಗುತ್ತಿ ಹೋಬಳಿ ಅಧ್ಯಕ್ಷ ವಿಷ್ಣು, ಎಸ್ಸಿಎಸ್ಟಿ ಘಟಕದ ಅಧ್ಯಕ್ಷ ಕುಮಾರ್, ಜಡೆ ಹೋಬಳಿ ಘಟಕದ ಅಧ್ಯಕ್ಷ ಮಹೇಂದ್ರ ತಲಗುಂದ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕಲ್ಲೀಂಮುಲ್ಲಾ, ಕುಪ್ಪಗಡ್ಡೆ ಹೋಬಳಿ ಅಧ್ಯಕ್ಷ ಆನಂದ ಕೆ., ಮುಖಂಡರಾದ ಸುಧೀರ್ ಭಟ್, ಶಿವಮೂರ್ತಿ ಮನೆಮನೆ ಇದ್ದರು.
ವರದಿ: ರಾಘವೇಂದ್ರ ಜಂಗಿನಕೊಪ್ಪ, ಸೊರಬ
ಕಸ ವಿಲೇವಾರಿಗೆ ಅಡ್ಡಿಡಿಸುವವರ ಮನೆ, ಕಚೇರಿ ಮುಂದೆ ಕಸ ಸುರಿಯುತ್ತೇವೆ: ಡಿಸಿಎಂ ಡಿಕೆಶಿ ಎಚ್ಚರಿಕೆ
ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್








