ಬೆಂಗಳೂರು : ಮದುವೆ ಸಮಾರಂಭಕ್ಕೆ ಕಲ್ಯಾಣ ಮಂಟಪ ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಮಂಟಪದ ಮಾಲೀಕರು ವಧು-ವರರ ವಯಸ್ಸಿನ ಕುರಿತ ದಾಖಲೆಗಳನ್ನು ಪರಿಶೀಲಿಸಬೇಕು ಎಂಬ ಕಠಿಣ ನಿಯಮಗಳಿಲ್ಲ ಎಂದು ಹೈ ಕೋರ್ಟ್ ಅಭಿಪ್ರಾಯಪಟ್ಟಿದೆ. ಅಪ್ರಾಪ್ತೆ ಹಾಗೂ ಗರ್ಭಿಣಿಯ ಮದುವೆಗಾಗಿ ಮಂಟಪವನ್ನು ಬಾಡಿಗೆಗೆ ನೀಡಿದ ಮಾಲೀಕರ ವಿರುದ್ಧ ದಾಖಲಾಗಿದ್ದ ಪ್ರಕರಣ ಮತ್ತು ಆ ಸಂಬಂಧ ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.
ಅಪ್ರಾಪ್ತೆಯ ಮದುವೆ ಮಾಡಿಕೊಡಲು ಮಂಟಪವನ್ನು ಬಾಡಿಗೆಗೆ ನೀಡುವ ಮೂಲಕ ಬಾಲ್ಯ ವಿವಾಹ ಮಾಡಿದ್ದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಹುಸೈನ್ ಪ್ಯಾಲೇಸ್‌ನ ಮಾಲೀಕ ಅಬ್ದುಲ್ ಅಮೀದ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ಕಲಬುರಗಿ ಹೈಕೋರ್ಟ್ ಪೀಠ ಈ ಆದೇಶ ನೀಡಿದೆ
ಪ್ರಕರಣದ ಹಿನ್ನೆಲೆ?
ಧಾರವಾಡ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 17 ವರ್ಷ 8 ತಿಂಗಳ ವಯಸ್ಸಿನ ಅಪ್ರಾಪ್ತೆಯೊಬ್ಬರು 2024ರ ಮೇ 27ರಂದು ಮಗುವಿಗೆ ಜನ್ಮ ನೀಡಿದ್ದರು. ಈ ಸಂಬಂಧ ಪರಿಶೀಲಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಗೋಲಗುಂಬಜ್ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 6 ಮಂದಿಯನ್ನು ಆರೋಪಿಗಳನ್ನಾಗಿ ಅರ್ಜಿದಾರ ಮದುವೆ ನಡೆದ ಸಭಾಂಗಣದ ಮಾಲೀಕರನ್ನು ಆರನೇ ಆರೋಪಿಯನ್ನಾಗಿಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದುಕೊಂಡಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಂತ್ರಸ್ತೆ ಮತ್ತು ಆರೋಪಿಯ ಪೋಷಕರು ವಿವಾಹ ಕಾರ್ಯಕ್ರಮ ನಡೆಸುವುದಕ್ಕೆ ಹಾಲ್ ಕಾಯ್ದಿರಿಸಿದ್ದರು. ಆ ಸಂದರ್ಭದಲ್ಲಿ ಮಂಟಪದ ಮಾಲೀಕರು ವಧು-ವರರ ವಯಸ್ಸನ್ನು ಪರಿಶೀಲಿಸಬೇಕು ಎಂಬುದರ ಕುರಿತ ಕಠಿಣ ನಿಯಮವಿಲ್ಲ. ಆದ ಕಾರಣ ಆರೋಪಿ ಅಪ್ರಾಪ್ತೆಯೊಂದಿಗೆ ಮದುವೆಯಾಗಲು ಕಲ್ಯಾಣ ಮಂಟಪದ ಮಾಲೀಕರ ಗಮನಕ್ಕಿತ್ತು ಎಂದು ಹೇಳಲಾಗುವುದಿಲ್ಲ. ಅಲ್ಲದೆ, ಅರ್ಜಿದಾರರು ಸಭಾಂಗಣದ ಮಾಲೀಕರು ಮಾತ್ರ ಆಗಿದ್ದಾರೆ. ಆದ್ದರಿಂದ ಅರ್ಜಿದಾರರನ್ನು ಆರೋಪಿಯನ್ನಾಗಿಸಲಾಗದು. ಹೀಗಾಗಿ, ಅವರ ವಿರುದ್ಧದ ಆರೋಪ ಪಟ್ಟಿಯನ್ನು ರದ್ದು ಮಾಡಬೇಕು ಎಂದು ಕೋರಿದ್ದರು.








