ನವದೆಹಲಿ: ಚೀನೀ ಯುನಿಟ್ರೀ ರೋಬೋಡಾಗ್ ಅನ್ನು ತನ್ನದೆಂದು ಹೇಳಿಕೊಳ್ಳುವ ಮೂಲಕ “ರಾಷ್ಟ್ರೀಯ ಮುಜುಗರವನ್ನು” ಉಂಟುಮಾಡಿದ್ದಕ್ಕಾಗಿ ಎಐ ಇಂಪ್ಯಾಕ್ಟ್ ಶೃಂಗಸಭೆ ಎಕ್ಸ್ಪೋವನ್ನು ಖಾಲಿ ಮಾಡುವಂತೆ ಅಧಿಕಾರಿಗಳು ಬುಧವಾರ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು (ಗ್ರೇಟರ್ ನೋಯ್ಡಾ) ಕೇಳಿಕೊಂಡಿದ್ದಾರೆ .
ಅಧಿಕಾರಿಗಳಿಂದ ನಮಗೆ ಇಂತಹ ಯಾವುದೇ ಆದೇಶ ಅಥವಾ ಸೂಚನೆ ಬಂದಿಲ್ಲ ಎಂದು ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ನೇಹಾ ಸಿಂಗ್ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ, “ವಿಶ್ವವಿದ್ಯಾಲಯದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದಿಂದ (propaganda campaign) ಅಲ್ಲಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತೀವ್ರವಾಗಿ ನೊಂದಿದ್ದಾರೆ” ಎಂದು ಹೇಳಿದೆ. ಅಲ್ಲದೆ, “ರೋಬೋಟಿಕ್ ಪ್ರೋಗ್ರಾಮಿಂಗ್ ನಮ್ಮ ಶೈಕ್ಷಣಿಕ ಪ್ರಯತ್ನದ ಒಂದು ಭಾಗವಾಗಿದೆ. ವಿದ್ಯಾರ್ಥಿಗಳು AI ಪ್ರೋಗ್ರಾಮಿಂಗ್ ಕಲಿಯಲು ಮತ್ತು ಜಾಗತಿಕವಾಗಿ ಲಭ್ಯವಿರುವ ಸಾಧನಗಳನ್ನು ಬಳಸಿ ನೈಜ ಜಗತ್ತಿನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಇದು ಪೂರಕವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ AI ಪ್ರತಿಭೆಗಳನ್ನು ಬೆಳೆಸುವುದು ಅತ್ಯಗತ್ಯವಾಗಿದೆ,” ಎಂದು ವಿಶ್ವವಿದ್ಯಾಲಯ ತಿಳಿಸಿದೆ.
ವಿಶ್ವವಿದ್ಯಾಲಯವು ತನ್ನ ದೃಷ್ಟಿಕೋನವು ವಿದ್ಯಾರ್ಥಿಗಳ ಕಲಿಕೆ ಮತ್ತು ನಾವೀನ್ಯತೆಯ ಮೇಲೆ ಕೇಂದ್ರೀಕೃತವಾಗಿದೆ ಎಂದು ಪ್ರತಿಪಾದಿಸಿದೆ. “ನಾವು ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಗಳನ್ನು ಒದಗಿಸುತ್ತೇವೆ, ಇದರಿಂದ ಅವರು ಪ್ರಾಯೋಗಿಕ ಅನುಭವವನ್ನು ಪಡೆಯಬಹುದು ಮತ್ತು ಭವಿಷ್ಯಕ್ಕಾಗಿ ಸಿದ್ಧರಾಗಬಹುದು. ನಕಾರಾತ್ಮಕತೆಯನ್ನು ಹರಡುವುದು ಹೊಸದನ್ನು ಕಲಿಯಲು ಮತ್ತು ಜಾಗತಿಕ ತಂತ್ರಜ್ಞಾನ ಬಳಸಿ ಕೌಶಲ್ಯ ಬೆಳೆಸಿಕೊಳ್ಳಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸಬಹುದು,” ಎಂದು ಅದು ಹೇಳಿದೆ.
ಗಲ್ಗೋಟಿಯಾಸ್ ರೋಬೋಡಾಗ್ ವಿವಾದ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ, ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ನೇಹಾ ಸಿಂಗ್ ಅವರು ರೋಬೋಟ್ ನಾಯಿಯನ್ನು ತೋರಿಸುತ್ತಾ ಹೀಗೆ ಹೇಳಿದ್ದಾರೆ: “ನೀವು ಒರಿಯನ್ (Orion) ಅನ್ನು ಭೇಟಿ ಮಾಡಬೇಕು. ಇದನ್ನು ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ.”
ಅಲ್ಲದೆ, ಈ ಯಂತ್ರವು ಕಣ್ಗಾವಲು (surveillance) ಮತ್ತು ಮೇಲ್ವಿಚಾರಣೆ ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಕ್ಯಾಂಪಸ್‌ನಾದ್ಯಂತ ಮುಕ್ತವಾಗಿ ಸಂಚರಿಸುತ್ತದೆ ಎಂದು ಅವರು ವಿವರಿಸಿದ್ದರು.
ಆದರೆ, ವಿಡಿಯೋ ನೋಡಿದ ಕೂಡಲೇ ಹಲವರು, ಈ ರೋಬೋಟ್ ನಾಯಿಯು ವಾಸ್ತವವಾಗಿ ಚೀನಾದ ರೋಬೋಟಿಕ್ಸ್ ಸಂಸ್ಥೆಯಾದ ‘ಯೂನಿಟ್ರೀ’ (Unitree) ನಿಂದ ಪಡೆದದ್ದಾಗಿದೆ ಎಂದು ಆರೋಪಿಸಿದರು.
ಗಲ್ಗೋಟಿಯಾಸ್ ನೀಡಿದ ಸ್ಪಷ್ಟನೆ
ಆನ್‌ಲೈನ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿತು. ತಾವು ಎಂದಿಗೂ ಈ ರೋಬೋಟ್ ನಾಯಿಯನ್ನು ತಯಾರಿಸಿದ್ದೇವೆ ಎಂದು ಹೇಳಿಕೊಂಡಿಲ್ಲ ಎಂದು ಅದು ತಿಳಿಸಿದೆ.
“ಗಲ್ಗೋಟಿಯಾಸ್ ಈ ರೋಬೋಡಾಗ್ ಅನ್ನು ನಿರ್ಮಿಸಿಲ್ಲ, ಹಾಗೆಂದು ನಾವು ಎಲ್ಲೂ ಹೇಳಿಕೊಂಡಿಲ್ಲ. ನಾವು ಮಾಡುತ್ತಿರುವುದು ಏನೆಂದರೆ, ಶೀಘ್ರದಲ್ಲೇ ಭಾರತದಲ್ಲೇ ಇಂತಹ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸುವ, ಇಂಜಿನಿಯರಿಂಗ್ ಮಾಡುವ ಮತ್ತು ತಯಾರಿಸುವಂತಹ ಪ್ರತಿಭೆಗಳನ್ನು ರೂಪಿಸುತ್ತಿದ್ದೇವೆ,” ಎಂದು ವಿಶ್ವವಿದ್ಯಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯೂನಿಟ್ರೀ (Unitree) ರೋಬೋಡಾಗ್ ಎಂದರೇನು?
ಯೂನಿಟ್ರೀ ರೋಬೋಟಿಕ್ಸ್‌ನ ‘ರೋಬೋಡಾಗ್‌ಗಳು’ ಸುಧಾರಿತ ನಾಲ್ಕು ಕಾಲಿನ ರೋಬೋಟ್‌ಗಳಾಗಿವೆ. ಇವು ನಿಜವಾದ ಪ್ರಾಣಿಗಳಂತೆ ನಡೆಯುವ ಮತ್ತು ಚಲಿಸುವ ಸಾಮರ್ಥ್ಯ ಹೊಂದಿದ್ದು, ಅಡೆತಡೆಗಳನ್ನು ದಾಟುವುದು, ಕೈಗಾರಿಕಾ ಸ್ಥಳಗಳ ತಪಾಸಣೆ ಮತ್ತು ಮನರಂಜನೆಗಾಗಿ ಬಳಸಲ್ಪಡುತ್ತವೆ.
ಯೂನಿಟ್ರೀ ಚೀನಾದ ರೋಬೋಟಿಕ್ಸ್ ಸಂಸ್ಥೆಯಾಗಿದ್ದು, ಬೋಸ್ಟನ್ ಡೈನಾಮಿಕ್ಸ್‌ನ ‘ಸ್ಪಾಟ್’ (Spot) ನಂತಹ ಇತರ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆಗೆ ಮತ್ತು ಸುಲಭವಾಗಿ ಇಂತಹ ಯಂತ್ರಗಳನ್ನು ತಯಾರಿಸಲು ಹೆಸರುವಾಸಿಯಾಗಿದೆ.








