ಮೈಸೂರು : ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಕಾಡಾನೆ ದಾಳಿಯಿಂದ ರೈತನೋರ್ವ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಪರಿಣಾಮಿಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಪರಿಣಾಮಿಪುರ ಗ್ರಾಮದ ಗುರುಮಲ್ಲಪ್ಪ (70) ಆನೆ ದಾಳಿಗೆ ಸಿಲುಕಿ ಮೃತ ರೈತ ಎಂದು ತಿಳಿದುಬಂದಿದೆ.ಗುರುಮಲ್ಲಪ್ಪ ಕಬ್ಬಿನ ಗದ್ದೆಗೆ ನೀರು ಹಾಯಿಸುವ ವೇಳೆ ಹಿಂದಿನಿಂದ ಬಂದ ಕಾಡಾನೆ ದಾಳಿ ಮಾಡಿ ತುಳಿದು ಸಾಯಿಸಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದು, ಈ ಒಂಟಿ ಸಲಗ ಶಿವನಸಮುದ್ರ, ಸತ್ಯ ಮಂಗಲ ಭಾಗದ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಡಾನೆ ಕಾಣಿಸಿಕೊಂಡ ಬಳಿಕ ಗ್ರಾಮಸ್ಥರು ದೂರವಾಣಿ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅವರು ಸಕಾಲಕ್ಕೆ ಬಾರದಿದ್ದರಿಂದಲೇ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ ಅರಣ್ಯ ಇಲಾಖೆಯವರ ಮೇಲೆ ಕ್ರಮ ಜರುಗಿಸಿ ಹಾಗೂ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಹೆಚ್ಚಿನ ಪರಿಹಾರ ನೀಡಿ ಎಂದೂ ಆಗ್ರಹಿಸಿದ್ದಾರೆ.








