ಬೀದರ್ : ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸುರೇಶ್ ಎಸ್. ಬಿರಾದಾರ್ ಅವರು ನೀಡಿದ ದೂರಿನ ಮೇರೆಗೆ ಭಾಲ್ಕಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದಂತೆ ಪ್ರಕರಣ ದಾಖಲಿಸಲಾಗಿದೆ. ಫೆ.7ರಂದು ವಾಟ್ಸಪ್‌ನಲ್ಲಿ ಹರಿದಾಡಿದ ವಿಡಿಯೋದಲ್ಲಿ ಭಗವಂತ್ ಖೂಬಾ ಅವರು ಈಶ್ವರ್ ಖಂಡ್ರೆ ಅವರನ್ನು ಏಕವಚನದಲ್ಲಿ ಅವಾಚ್ಯವಾಗಿ ಬೈದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈಶ್ವರ್ ಖಂಡ್ರೆ ಅವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವುದರಿಂದ ಅನುಯಾಯಿಗಳಿಗೆ ನೋವಾಗಿದೆ. ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಅವುಗಳಿಂದ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭಗವಂತ್ ಖೂಬಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪರಿಸ್ಥಿತಿ ಸಂಘರ್ಷಕ್ಕೆ ದಾರಿ ಮಾಡಿಕೊಡಬಹುದು ಎಂದು ದೂರಿನಲ್ಲಿ ಎಚ್ಚರಿಸಲಾಗಿದೆ. ಈ ಸಂಬಂಧ ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.








