ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸ್ಮಾರ್ಟ್ ಒಳ ಉಡುಪು ಅಭಿವೃದ್ಧಿಪಡಿಸಿದ್ದಾರೆ, ಇದು ಫ್ಲಾಟಸ್ ನಲ್ಲಿನ ಹೈಡ್ರೋಜನ್ ಮಟ್ಟವನ್ನು ಪತ್ತೆಹಚ್ಚುವ ಮೂಲಕ ಮಾನವನ ಹೊಟ್ಟೆಯುಬ್ಬರವನ್ನು ಅಳೆಯುವ ಮೊದಲ ಧರಿಸಬಹುದಾದ ಸಾಧನವಾಗಿದೆ.
ಈ ಸಣ್ಣ ಸಾಧನವನ್ನು ಸಾಮಾನ್ಯ ಒಳ ಉಡುಪುಗಳಿಗೆ ಜೋಡಿಸಬಹುದು. ಇದು ಕರುಳಿನ ಅನಿಲ ಉತ್ಪಾದನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಎಲೆಕ್ಟ್ರೋಕೆಮಿಕಲ್ ಸೆನ್ಸರ್ಗಳನ್ನು ಬಳಸುತ್ತದೆ. ಈ ಹಿಂದಿನ ವೈದ್ಯಕೀಯ ಅಂದಾಜಿನ ಪ್ರಕಾರ, ಜನರು ದಿನಕ್ಕೆ ಸರಾಸರಿ 14 ಬಾರಿ ಅಪಾನವಾಯುವನ್ನು ಹೊರಹಾಕುತ್ತಾರೆ ಎಂದು ಹೇಳಲಾಗಿತ್ತು. ಆದರೆ ಆ ಅಧ್ಯಯನಗಳು ವ್ಯಕ್ತಿಗಳ ಸ್ವಯಂ ವರದಿ ಅಥವಾ ಸಣ್ಣ ಮಟ್ಟದ ಪರೀಕ್ಷೆಗಳ ಮೇಲೆ ಆಧಾರಿತವಾಗಿದ್ದವು. ಇದರಲ್ಲಿ ಜನರು ನಿದ್ದೆಯಲ್ಲಿದ್ದಾಗ ಸಂಭವಿಸುವ ಕ್ರಿಯೆಗಳನ್ನು ದಾಖಲಿಸಲು ವಿಫಲರಾಗುತ್ತಿದ್ದರು ಅಥವಾ ಮರೆವಿನ ಕಾರಣದಿಂದ ತಪ್ಪು ಅಂಕಿಅಂಶಗಳು ಲಭ್ಯವಾಗುತ್ತಿದ್ದವು.
ಇತ್ತೀಚಿನ ಅಧ್ಯಯನದಲ್ಲಿ, ಈ ಸ್ಮಾರ್ಟ್ ಸಾಧನವನ್ನು ಧರಿಸಿದ ಆರೋಗ್ಯವಂತ ವಯಸ್ಕರಲ್ಲಿ ದಿನಕ್ಕೆ ಸರಾಸರಿ 32 ಬಾರಿ ಅಪಾನವಾಯು ವಿಸರ್ಜನೆಯಾಗುವುದು ಕಂಡುಬಂದಿದೆ. ಇದು ಹಳೆಯ ಅಂದಾಜಿಗಿಂತ ಸುಮಾರು ದುಪ್ಪಟ್ಟಾಗಿದೆ. ಒಬ್ಬೊಬ್ಬರಲ್ಲಿ ಇದರ ಪ್ರಮಾಣ ವ್ಯತ್ಯಾಸವಿದ್ದು, ದಿನಕ್ಕೆ ಕನಿಷ್ಠ 4 ರಿಂದ ಗರಿಷ್ಠ 59 ಬಾರಿ ದಾಖಲಾಗಿದೆ. ವೈದ್ಯರಿಗೆ ಅತಿಯಾದ ಗ್ಯಾಸ್ ಸಮಸ್ಯೆಯ ಬಗ್ಗೆ ನಿಖರವಾದ ಮಾಹಿತಿ ದಾಖಲಿಸಲು ಈವರೆಗೆ ಯಾವುದೇ ವಿಶ್ವಾಸಾರ್ಹ ಮಾರ್ಗವಿರಲಿಲ್ಲ. ಆದರೆ ಈ ಸಾಧನವು ಹೈಡ್ರೋಜನ್ ಅನಿಲವನ್ನು ಗುರುತಿಸುವ ಮೂಲಕ ಕರುಳಿನ ಮೈಕ್ರೋಬಯೋಮ್ ಚಟುವಟಿಕೆಯನ್ನು ನಿಖರವಾಗಿ ಪತ್ತೆಹಚ್ಚುತ್ತದೆ.
ಹ್ಯೂಮನ್ ಫ್ಲಾಟಸ್ ಅಟ್ಲಾಸ್ (The Human Flatus Atlas)
ಅಪಾನವಾಯುವು ಸಾಮಾನ್ಯವಾಗಿ ಹೈಡ್ರೋಜನ್, ಕಾರ್ಬನ್ ಡೈಆಕ್ಸೈಡ್ ಮತ್ತು ನೈಟ್ರೋಜನ್ ಅನ್ನು ಒಳಗೊಂಡಿರುತ್ತದೆ; ಕೆಲವರಲ್ಲಿ ಮಿಥೇನ್ ಕೂಡ ಉತ್ಪತ್ತಿಯಾಗುತ್ತದೆ. ರಕ್ತದ ಸಕ್ಕರೆ ಅಥವಾ ಕೊಲೆಸ್ಟ್ರಾಲ್ನಂತೆ, ಅಪಾನವಾಯುವಿನ ಪ್ರಮಾಣಕ್ಕೆ ಯಾವುದೇ ನಿರ್ದಿಷ್ಟ ‘ನಾರ್ಮಲ್ ರೇಂಜ್’ ಈವರೆಗೆ ಲಭ್ಯವಿರಲಿಲ್ಲ. ಇದನ್ನು ಸರಿಪಡಿಸಲು ಸಂಶೋಧಕರು ‘ಹ್ಯೂಮನ್ ಫ್ಲಾಟಸ್ ಅಟ್ಲಾಸ್’ ಎಂಬ ಬೃಹತ್ ಯೋಜನೆಯನ್ನು ಆರಂಭಿಸುತ್ತಿದ್ದಾರೆ. ಈ ಯೋಜನೆಯಡಿ 18 ವರ್ಷ ಮೇಲ್ಪಟ್ಟ ಅಮೆರಿಕನ್ನರನ್ನು ಈ ಸ್ಮಾರ್ಟ್ ಒಳ ಉಡುಪು ಧರಿಸಲು ನೇಮಿಸಿಕೊಳ್ಳಲಾಗುತ್ತಿದೆ.
ಈ ಅಧ್ಯಯನವು ಆಹಾರ ಪದ್ಧತಿ, ಮಲದ ಮಾದರಿ ಮತ್ತು ಕರುಳಿನ ಆರೋಗ್ಯಕ್ಕೂ ಅಪಾನವಾಯುವಿಗೂ ಇರುವ ಸಂಬಂಧವನ್ನು ಮ್ಯಾಪ್ ಮಾಡಲಿದೆ. ಇದರಲ್ಲಿ ಭಾಗವಹಿಸುವವರನ್ನು ಅವರ ಜೀರ್ಣಕ್ರಿಯೆಯ ಆಧಾರದ ಮೇಲೆ ಕೆಳಗಿನಂತೆ ವರ್ಗೀಕರಿಸಲಾಗಿದೆ:
* ಜೆನ್ ಡೈಜೆಸ್ಟರ್ಸ್ (Zen Digesters): ಹೆಚ್ಚು ನಾರಿನಂಶ ಸೇವಿಸಿದರೂ ಕಡಿಮೆ ಗ್ಯಾಸ್ ಉತ್ಪಾದಿಸುವವರು.
* ಹೈಡ್ರೋಜನ್ ಹೈಪರ್ ಪ್ರೊಡ್ಯೂಸರ್ಸ್ (Hydrogen Hyperproducers): ಅತಿಯಾದ ಗ್ಯಾಸ್ ಉತ್ಪಾದಿಸುವವರು.
ದೈನಂದಿನ ಜೀವನದಲ್ಲಿ ಸೂಕ್ಷ್ಮಜೀವಿಗಳ ಕಿಣ್ವನ (Fermentation) ಪ್ರಕ್ರಿಯೆಯನ್ನು ಸ್ಪಷ್ಟಪಡಿಸುವುದು ಮತ್ತು ಪ್ರೊಬಯೋಟಿಕ್ ಅಥವಾ ಆಹಾರದ ಬದಲಾವಣೆಗಳ ಪರಿಣಾಮವನ್ನು ಮೌಲ್ಯಮಾಪನ ಮಾಡುವುದು ಈ ಸಂಶೋಧಕರ ಆಶಯವಾಗಿದೆ. ಈ ತಂತ್ರಜ್ಞಾನದ ಪರವಾನಗಿ ನೀಡಲು ಸಂಶೋಧಕರು ಈಗಾಗಲೇ ಪೇಟೆಂಟ್ ಪಡೆದಿದ್ದಾರೆ ಮತ್ತು ‘ವೆಂಟೋಸಿಟಿ’ (Ventoscity) ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.








