ಸಾರ್ವಜನಿಕರು ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು. ಇದರಿಂದ ಸಂಭಾವ್ಯ ವಾಂತಿ ಬೇಧಿ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಬೇಸಿಗೆ ಪ್ರಾರಂಭದ ಹಿನ್ನಲೆಯಲ್ಲಿ ಜಾತ್ರೆ ಹಾಗೂ ಉತ್ಸವಗಳಲ್ಲಿ ಕಲುಷಿತ ನೀರಿನಿಂದ, ಕಲುಷಿತ ಆಹಾರ ಸೇವನೆಯಿಂದ ಸಾಮಾನ್ಯವಾಗಿ ವಾಂತಿ ಬೇಧಿ ಸೇರಿದಂತೆ ಟೈಫಾಯಿಡ್, ಕಾಲಾರ, ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ.
ಅದರಲ್ಲೂ ವಾಂತಿ ಬೇಧಿ ಪ್ರಕರಣಗಳು ಕಂಡುಬಂದ ಸಂದರ್ಭದಲ್ಲಿ ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು. ಓಆರ್‌ಎಸ್ ಜೀವಜಲವನ್ನು ತಯಾರಿಸುವಾಗ 1 ಲೀ. ನೀರಿಗೆ ಆರೋಗ್ಯ ಇಲಾಖೆಯಿಂದ ಕೊಡುವ ಪೊಟ್ಟಣದಲ್ಲಿರುವ ಪುಡಿಯನ್ನು ಸಂಪೂರ್ಣವಾಗಿ ಹಾಕಿ ಮಿಶ್ರಣ ಮಾಡಿದ ದ್ರಾವಣವನ್ನು ವಾಂತಿ ಬೇಧಿ ಭಾದಿತರಿಗೆ ಕುಡಿಯಲು ಕೊಡಬೇಕು ಹಾಗೂ ಇದನ್ನು 24 ಗಂಟೆಯೊಳಗೆ ಸಂಪೂರ್ಣವಾಗಿ ಬಳಸಲು ಆದ್ಯತೆ ನೀಡಬೇಕು ಎಂದಿದ್ದಾರೆ.
ಕಲುಷಿತ ನೀರಿನ ಸೇವನೆಯಿಂದ ಸಾಮಾನ್ಯವಾಗಿ ವಾಂತಿ-ಬೇಧಿ, ಕಾಲರಾ, ಟೈಪಾಯಿಡ್, ಹೆಪಟೈಟಸ್-ಎ, ಗಿಯಾರ್ಡಿಯಾ, ಸಾಲ್ಮೋನೆಲ್ಲಾ ಶಿಗೆಲ್ಲೋಸಿಸ್, ಅಮೀಬಿಯಾಸಿಸ್, ಇ-ಕೋಲಿ (ಇವುಗಳಲ್ಲಿ ವಾಂತಿ-ಬೇಧಿ, ಕಾಲರಾ, ಹೆಪಟೈಟಸ್-ಎ ಮತ್ತು ಕಲುಷಿತ ಆಹಾರ ಸೇವನೆಯಿಂದ ಸಹ ರೋಗ ಬರಬಹುದು) ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಸಾರ್ವಜನಿಕರು ಶುದ್ದ ನೀರಿನ ಘಟಕದ ನೀರನ್ನು ಕುಡಿಯಬೇಕು ಎಂದಿದ್ದಾರೆ.
ಮಲ-ಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನೇ ಬಳಸಬೇಕು. ತಂಗಳು ಆಹಾರ ಸೇವಿಸದೇ ಬೆಳಗಿನ ಆಹಾರ ಬೆಳಿಗ್ಗೆ ಹಾಗೂ ರಾತ್ರಿ ಆಹಾರ ರಾತ್ರಿ ಮಾತ್ರ ಬಳಸಬೇಕು. ಮುಖ್ಯವಾಗಿ ಬೇಸಿಗೆಯಲ್ಲಿ ಹೆಚ್ಚು ಜಾಗೃತಿ ವಹಿಸಬೇಕು.
ತಯಾರಿಸಿದ ಆಹಾರದದ ಮೇಲೆ ನೊಣ ಕೂಡದಂತೆ ಮುಚ್ಚಳ, ಕುಡಿಯುವ ನೀರು ತುಂಬಿದ ನಂತರ ಪಾತ್ರೆಗಳಿಗೆ ಮುಚ್ಚಳ ಮುಚ್ಚಬೇಕು. ಆದಷ್ಟು ನಳ ಇರುವ ಪಾತ್ರೆಗಳನ್ನು ಬಳಸಿ, ನೀರಿನಲ್ಲಿ ಕೈ ಅದ್ದದಂತೆ ಮುಂಜಾಗೃತೆ ವಹಿಸಬೇಕು ಎಂದು ಹೇಳಿದ್ದಾರೆ.
ರಸ್ತೆ ಬದಿ ತೆರೆದಿಟ್ಟ ಅಥವಾ ಕತ್ತರಿಸಿದ ಹಣ್ಣುಗಳನ್ನು ತಿನ್ನಬಾರದು. ನೊಣಗಳು ಆಹಾರದ ಮೇಲೆ ಕುಳಿತುಕೊಳ್ಳುವ ಸಾಧ್ಯತೆಯಿದ್ದು, ಧೂಳು ಸಹ ಆಹಾರದ ಮೇಲೆ ಮೆತ್ತಿಕೊಂಡಿರುತ್ತದೆ. ವಾಂತಿ-ಬೇಧಿ ಅಥವಾ ಕಾಲರಾ ಸೋಂಕಿತರಿಗೆ ಮನೆಯಲ್ಲಿಯೇ ತಯಾರಿಸಿದ ಗಂಜಿ, ಬೇಳೆ ತಿಳಿ, ನಿಂಬು ಪಾನಕ ಹಾಗೂ ಸಾಧ್ಯವಾದರೆ ಎಳೆನೀರು ಕೊಡುವುದು ಉತ್ತಮ. ಊಟದ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ ತಪ್ಪದೇ ತೊಳೆಯಬೇಕು.
ಮೇಲ್ಕಂಡ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಸುರಕ್ಷಿತರಾಗಿರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








