ಕಾಯ್ದಿರಿಸಿದ ಟಿಕೆಟ್ ನೊಂದಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ಕಠಿಣ ನಿಯಮಗಳನ್ನು ಪರಿಚಯಿಸಿದೆ. ಪ್ರಯಾಣಿಕರು ಗೊತ್ತುಪಡಿಸಿದ ಬೋರ್ಡಿಂಗ್ ನಿಲ್ದಾಣದಿಂದ ಹತ್ತದಿದ್ದರೆ, ಕಾಯ್ದಿರಿಸಿದ ಆಸನವನ್ನು ನಿಮಿಷಗಳಲ್ಲಿ ಕಳೆದುಕೊಳ್ಳಬಹುದು.
ಕಾಯ್ದಿರಿಸಿದ ಪ್ರಯಾಣಿಕರಿಗಾಗಿ ಟಿಕೆಟ್ ಪರೀಕ್ಷಕರು (TTE) ಇನ್ಮುಂದೆ ಮುಂದಿನ ನಿಲ್ದಾಣದವರೆಗೆ ಕಾಯುವುದಿಲ್ಲ.
ಹಿಂದಿನ ನಿಯಮದಂತೆ, ಒಬ್ಬ ಪ್ರಯಾಣಿಕನು ತನ್ನ ನಿಗದಿತ ನಿಲ್ದಾಣದಲ್ಲಿ ರೈಲು ಹತ್ತಲು ವಿಫಲವಾದರೆ, ಟಿಟಿಇ (TTE) ಆ ಸೀಟನ್ನು ಮುಂದಿನ ಎರಡು ನಿಲ್ದಾಣಗಳವರೆಗೆ ಯಾರಿಗೂ ನೀಡದೆ ಖಾಲಿ ಇಡುತ್ತಿದ್ದರು. ಆದರೆ, ಈಗ ಟಿಟಿಇಗಳಿಗೆ ಹೊಸ ಹೆಚ್.ಹೆಚ್.ಟಿ (Hand Held Terminals – HHT) ಟ್ಯಾಬ್ಲೆಟ್‌ಗಳನ್ನು ನೀಡಿರುವುದರಿಂದ ಈ ನಿಯಮ ಬದಲಾಗಿದೆ. ಕಾಯ್ದಿರಿಸಿದ ಪ್ರಯಾಣಿಕರು ರೈಲು ಹತ್ತದಿದ್ದರೆ, ಅದನ್ನು ತಕ್ಷಣವೇ ಟ್ಯಾಬ್ಲೆಟ್‌ನಲ್ಲಿ ದಾಖಲಿಸಲಾಗುತ್ತದೆ. ಈ ಸಿಸ್ಟಮ್ ತಕ್ಷಣವೇ ಆ ಸೀಟನ್ನು ವೇಟಿಂಗ್ ಲಿಸ್ಟ್‌ನಲ್ಲಿರುವವರಿಗೆ ಅಥವಾ ಆರ್‌ಎಸಿ (RAC) ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ಹಂಚಿಕೆ ಮಾಡುತ್ತದೆ.
ನಿಮ್ಮ ಸೀಟು ಬೇರೆಯವರಿಗೆ ಹಂಚಿಕೆಯಾದರೆ ಬರಲಿದೆ SMS ಅಲರ್ಟ್
ನಿಮ್ಮ ಸೀಟನ್ನು ಒಮ್ಮೆ ಬೇರೆ ಪ್ರಯಾಣಿಕರಿಗೆ ಹಂಚಿಕೆ ಮಾಡಿದ ತಕ್ಷಣ, ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ (SMS) ಸಂದೇಶ ಬರಲಿದೆ. ಆದರೆ, ಟಿಕೆಟ್ ಬುಕ್ ಮಾಡುವಾಗ ಯಾರು ತಮ್ಮ ಸ್ವಂತ ಮೊಬೈಲ್ ಸಂಖ್ಯೆಯನ್ನು ನೀಡಿರುವುದಿಲ್ಲವೋ, ಅಂತಹವರಿಗೆ ಈ ಅಲರ್ಟ್ ಸಿಗುವುದಿಲ್ಲ. ಅನೇಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ತಮ್ಮ ವೈಯಕ್ತಿಕ ಫೋನ್ ಸಂಖ್ಯೆ ನೀಡುವ ಬದಲು, ಟಿಕೆಟ್ ಬುಕ್ ಮಾಡುವವರ ಸಂಖ್ಯೆಯನ್ನು ನೀಡಿರುತ್ತಾರೆ. ಮೀಸಲಾತಿ ಸಮಯದಲ್ಲಿ ದಾಖಲಿಸಲಾದ ಮೊಬೈಲ್ ಸಂಖ್ಯೆಗೆ ಮಾತ್ರ ಎಸ್‌ಎಂಎಸ್ ಸಂದೇಶ ರವಾನೆಯಾಗುತ್ತದೆ.
ವಿಶೇಷವಾಗಿ ಟ್ರಾವೆಲ್ ಏಜೆಂಟ್‌ಗಳ ಮೂಲಕ ಟಿಕೆಟ್ ಬುಕ್ ಮಾಡಿದಾಗ, ಹೆಚ್ಚಾಗಿ ಏಜೆಂಟ್‌ನ ಮೊಬೈಲ್ ಸಂಖ್ಯೆಯೇ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಸಂದೇಶ ತಲುಪುವುದಿಲ್ಲ.
ಸೀಟು ಕಳೆದುಕೊಳ್ಳುವುದನ್ನು ತಪ್ಪಿಸಲು ಪ್ರಮುಖ ಸೂಚನೆ
ನಿಮ್ಮ ಕಾಯ್ದಿರಿಸಿದ ಸೀಟನ್ನು ಉಳಿಸಿಕೊಳ್ಳಲು, ಟಿಕೆಟ್‌ನಲ್ಲಿ ನಮೂದಿಸಿರುವ ಬೋರ್ಡಿಂಗ್ ಸ್ಟೇಷನ್‌ನಲ್ಲೇ ಸರಿಯಾದ ಸಮಯಕ್ಕೆ ರೈಲು ಹತ್ತಬೇಕು. ಒಂದು ವೇಳೆ ನೀವು ಬೇರೆ ನಿಲ್ದಾಣದಿಂದ ರೈಲು ಹತ್ತಲು ಯೋಜಿಸಿದ್ದರೆ, ರೈಲು ಹೊರಡುವ ಕನಿಷ್ಠ 24 ಗಂಟೆಗಳ ಮೊದಲು ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ನಿಮ್ಮ ‘ಬೋರ್ಡಿಂಗ್ ಪಾಯಿಂಟ್’ ಅನ್ನು ಬದಲಾಯಿಸಿಕೊಳ್ಳುವುದು ಕಡ್ಡಾಯ.








