ಮಂಡ್ಯ : ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಮೂಲಕ ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ಅಭಿಪ್ರಾಯಪಟ್ಟರು.
ಮದ್ದೂರು ತಾಲೂಕಿನ ಸೋಮನಹಳ್ಳಿಯ ಶ್ರೀ ಸಿದ್ಧಾರೂಢ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಸಿದ್ಧಾರೂಢ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮಕ್ಕಳ ಪ್ರತಿಭೆ ಅರಳಿಸುವ ವೇದಿಕೆಯಾಗಿದ್ದು, ಶಿಸ್ತು, ಸಂಸ್ಕಾರ, ಸಂಸ್ಕೃತಿ, ಭಾಷಾಭಿಮಾನ ಮತ್ತು ಸಮಾಜ ಪರಿವರ್ತನೆ ಶಾಲೆಯ ಮುಖ್ಯ ಗುರಿಯಾಗಿದೆ. ಎಲ್ಲ ದಾನಕ್ಕಿಂತ ವಿದ್ಯಾದಾನ ಶ್ರೇಷ್ಠವಾದುದು. ವಿದ್ಯೆ ಮನುಷ್ಯನನ್ನು ಬಾಳಿ ಬೆಳಸುತ್ತದೆ. ಎತ್ತರಕ್ಕೆ ಬೆಳೆದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಈ ಶಾಲೆಯ ವಿದ್ಯಾರ್ಥಿಗಳು ಸಹ ಕಠಿಣ ಪರಿಶ್ರಮದಿಂದ ಓದಿ ಮುಂದೆ ಉನ್ನತ ಸಾಧನೆ ಮಾಡುವ ಮೂಲಕ ಇತರೇ ಮಕ್ಕಳಿಗೆ ಪ್ರೇರಣೆಯಾಗಬೇಕೆಂದು ಕರೆ ನೀಡಿದರು.
ಪ್ರತಿ ವರ್ಷವೂ 10ನೇ ತರಗತಿಯ ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಹೆಚ್ಚು ಫಲಿತಾಂಶ ಸಾಧಿಸುತ್ತಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ತೋರಿಸುತ್ತದೆ. ಭೂಮಿಗೆ ಬಿದ್ದ ಬೀಜ ಅಂದೇ ಫಲ ಕೊಡುವುದಿಲ್ಲ. 10 ವರ್ಷಗಳ ಹಿಂದೆ ಬೆರಳಣಿಕೆ ಮಕ್ಕಳದೊಂದಿಗೆ ಪ್ರಾರಂಭವಾದ ಶಾಲೆ ಇಂದು 400 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಸಂಸ್ಥೆಯ ಸಂಸ್ಥಾಪಕರಾದ ನಂದೀಶ್ ಅವರ ಪರಿಶ್ರಮ ಸಾಕಷ್ಟಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀ ಸಿದ್ಧಾರೂಢ ಆಶ್ರಮದ ಶ್ರೀ ಸೀನಪ್ಪ ಸ್ವಾಮೀಜಿ ಮಾತನಾಡಿ, ವಿದ್ಯೆಯೊಂದಿಗೆ ಸಂಸ್ಕಾರ, ಸಂಸ್ಕೃತಿಯನ್ನು ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಕಲಿಸಬೇಕು. ದೇಶಾಭಿಮಾನವನ್ನು ಮಕ್ಕಳು ಚಿಕ್ಕಂದಿನಿಂದಲೇ ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ, ಗೌರವಯುತ ಬದುಕು ನಡೆಸಬೇಕೆಂದು ಕಿವಿಮಾತು ಹೇಳಿದರು.
ಶಿವನ ಸಮುದ್ರದ ವೇದಮೂರ್ತಿ ಚನ್ನಮಲ್ಲೇಶ್ವರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ
ಮಾತನಾಡಿ, ಸಂಸ್ಥೆಯು ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಸರ್ವರ ಮಾರ್ಗದರ್ಶನದಲ್ಲಿ ಯಶಸ್ಸು ಸಾಧಿಸಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹಾಗೂ ಪಾಲಕರ ಪಾತ್ರ ಮಹತ್ವದ್ದಾಗಿದ್ದು, ಸಂಸ್ಥೆಯಲ್ಲಿ ನಡೆಯುತ್ತಿರುವ ವಾರ್ಷಿಕೋತ್ಸವ ಕಾರ್ಯಕ್ರಮವು ಮಕ್ಕಳಲ್ಲಿರುವ ಪ್ರತಿಭೆ ಹೊರ ತರಲು ಸಾಧ್ಯವಾಗಲಿದೆ ಎಂದರು.
ಬೆಂಗಳೂರಿನ ಶ್ರೀ ಓಂಕಾರೇಶ್ವರ ಆಶ್ರಮದ ಶ್ರೀ ಕೇಶವಾನಂದಪುರಿ ಮಹಾಸ್ವಾಮಿಜೀ ಕಾರ್ಯಕ್ರಮ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವಾರ್ಷಿಕೋತ್ಸವದ ಅಂಗವಾಗಿ ಆಹಾರ ಮೇಳ, ವಿಜ್ಞಾನ ಮತ್ತು ತಂತ್ರಜ್ಞಾನದ ವಸ್ತು ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ವೇಳೆ ಮನ್ ಮುಲ್ ನಿರ್ದೇಶಕ ಹರೀಶ್ ಬಾಬು, ಗಿರಿಜನ ಸಮಗ್ರ ಜಿಲ್ಲಾ ಅಧಿಕಾರಿ ಕೆ.ಎಸ್.ಹೊನ್ನೇಗೌಡ, ಮನ್ ಮುಲ್ ಉಪ ವ್ಯವಸ್ಥಾಪಕ ಡಾ. ಮಂಜೇಶ್ ಗೌಡ, ಪಿಎಸಿಎಸ್ ಅಧ್ಯಕ್ಷ ರಾಮಚಂದ್ರ, ಶಶಿಕಲಾ ಹೊನ್ನೇಗೌಡ ಸಂಸ್ಥೆಯ ಆಡಳಿತ ಮಂಡಳಿ, ಸಿಬ್ಬಂದಿ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಮಂಡ್ಯ ಒಮ್ಮತಕ್ಕೆ ಬಾರದ ಸಂಧಾನ ಸಭೆ: ಸಚಿವರು- ಪ್ರತಿಭಟನಾಕಾರರ ಸಭೆ ವಿಫಲ
ಬಂಜಾರ ಸಮುದಾಯಕ್ಕೆ ನ್ಯಾಯ ಒದಗಿಸಿದ್ದು ಕಾಂಗ್ರೆಸ್: ಡಿಸಿಎಂ ಡಿ.ಕೆ. ಶಿವಕುಮಾರ್








