ಬೆಂಗಳೂರು: ನಿನ್ನೆ ದಿಢೀರ್ ಹೃದಯಾಘಾತದಿಂದ ನಿಧನರಾದಂತ ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಜೋ ಸೈಮನ್ ಅವರ ಅಂತ್ಯಕ್ರಿಯೆಯನ್ನು ಇಂದು ನೆರವೇರಿಸಲಾಯಿತು. ಖ್ಯಾತ ನಿರ್ದೇಶಕ ಜೋ ಸೈಮನ್ ಮಣ್ಣಲ್ಲಿ ಮಣ್ಣಾಗುವ ಮೂಲಕ ಇನ್ನೂ ನೆನಪಾಗಿ ಉಳಿದಿದ್ದಾರೆ.
ನಿನ್ನೆ ನಿಧನರಾದಂತ ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಜೋ ಸೈಮನ್ ಅವರ ಅಂತ್ಯಕ್ರಿಯೆಯನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿಸಲಾಗಿದೆ. ಶಿಲುಬೆ ಬೆಟ್ಟದ ಬಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ.
ಎಸ್.ಎಂ.ಜೋಸೈಮನ್ ಒಬ್ಬ ಕನ್ನಡ ಚಲನಚಿತ್ರದ ನಿರ್ದೇಶಕ ಮತ್ತು ಲೇಖಕ. ಇವರ ಪ್ರಸಿದ್ಧಿ ಪಡೆದ ಚಿತ್ರಗಳಲ್ಲಿ ಸಹೋದರರ ಸವಾಲ್(1977), ಒಂದು ಪ್ರೇಮದ ಕಥೆ(1977), ಬಂಗಾರದ ಗುಡಿ(1976) ಮೊದಲಾದವುಗಳು.
ಜೋ ಸೈಮನ್ ಮಂಡ್ಯದವರು.ತಮ್ಮ ಓದನ್ನು ಮಂಡ್ಯದಲ್ಲಿ ಮುಗಿಸಿದ ನಂತರ 1967 ರಲ್ಲಿ ರಗಸ್ಯ ಪೊಲೀಸ್ 115 ಮೂಲಕ ಚಲನಚಿತ್ರ ರಂಗ ಪ್ರವೇಶಿಸಿದರು.ಪ್ರಾರಂಭದಲ್ಲಿ ಅವರು. ಟಚ್ ಅಪ್ ಬಾಯ್, ಸಹಾಯಕ ಮೇಕ್ಅಪ್ ಮ್ಯಾನ್ ಮತ್ತು ಸೆಟ್ ಬಾಯ್ ಆಗಿ ಕೆಲಸ ಮಾಡಿದ್ದರು. ನಂತರ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಅವರು ಕೆ. ಎಸ್. ಆರ್. ದಾಸ್, ಆರ್.ಎನ್. ಜಯಗೋಪಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಮುಂತಾದ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರು.
ಅವರ ಮೊದಲ ನಿರ್ದೇಶನದ ಚಿತ್ರ ಒಂದು ಪ್ರೇಮದ ಕಥೆ, ರಜನಿಕಾಂತ್ ಮತ್ತು ಎಲ್.ವಿ.ಶಾರದಾ ಅಭಿನಯಿಸಿದ್ದರು. ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರಹಗಾರರು ಕೂಡ. 30 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಅವುಗಳಲ್ಲಿ ಪ್ರಮುಖವು ಸಾಹಸಸಿಂಹ, ನ್ಯಾಯ ಗೆದ್ದಿತು, ಪ್ರೇಮ ಜಾಲ, ರವಿ ವರ್ಮ, ಊರಿಗೆ ಉಪಕಾರಿ, ನನ್ನ ರೋಷ ನೂರು ವರುಷ ಮುಂತಾದವು. ಅವರ ಪುತ್ರರಾದ ರಾಜೇಂದ್ರ ಸೈಮನ್ ಮತ್ತು ಜೀತೆಂದ್ರ ಸೈಮನ್ ಇಬ್ಬರೂ ನಟರಾಗಿದ್ದರು. ಇದೀಗ ನಿಧನರಾಗಿ, ಮಣ್ಣಲ್ಲಿ ಮಣ್ಣಾಗುವ ಮೂಲಕ ಖ್ಯಾತ ಸ್ಯಾಂಡಲ್ ವುಡ್ ನಿರ್ದೇಶಕ, ನಟ ಜೋ ಸೈಮನ್ ನೆನಪಾಗಿ ಉಳಿದಿದ್ದಾರೆ.








