ಹಾವೇರಿ : ಹಾವೇರಿ ಜಿಲ್ಲೆಯ ಬ್ಯಾಡಗಿ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಣ್ಣನವರಿಗೆ ಲಘು ಹೃದಯಾಘಾತ ಆಗಿದೆ. ತಕ್ಷಣವೇ ಶಾಸಕ ಬಸವರಾಜ್ ಶಿವಣ್ಣ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶಾಸಕರ ಆರೋಗ್ಯ ಸ್ಥಿರವಾಗಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ.
ನಿನ್ನೆ ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಸಾಧನ ಸಮಾವೇಶದಲ್ಲಿ ಭಾಗವಹಿಸಲು ಸಚಿವ ಶಿವಾನಂದ ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಹಾಜರಾಗಿದ್ದರು. ಈ ಕಾರ್ಯಕ್ರಮದ ತಯಾರಿ ಹಾಗೂ ಭಾಗವಹಿಸುವ ಕಾರ್ಯದಲ್ಲಿ ಶಾಸಕ ಬಸವರಾಜ್ ಶಿವಣ್ಣ ಅವರು ದಿನಪೂರ್ತಿ ಬ್ಯುಸಿಯಾಗಿದ್ದರು. ಬೆಳಗ್ಗೆಯಿಂದಲೇ ಸ್ವಲ್ಪ ಸುಸ್ತು ಕಾಣಿಸಿಕೊಂಡಿದ್ದರೂ, ಕಾರ್ಯಕ್ರಮದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
ಮಧ್ಯಾಹ್ನದ ಹೊತ್ತಿಗೆ ಅಸ್ವಸ್ಥತೆ ಹೆಚ್ಚಾಗುತ್ತಿದ್ದಂತೆ ಕುಟುಂಬಸ್ಥರು ಹಾಗೂ ಪಕ್ಷದ ಕಾರ್ಯಕರ್ತರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ಪ್ರಾಥಮಿಕ ತಪಾಸಣೆಯಲ್ಲಿ ಹೃದಯ ಸಂಬಂಧಿತ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಹಾವೇರಿಯಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.ಈ ವೇಳೆ 2 ಬ್ಲಾಕ್ ಕಂಡುಬಂದಿದ್ದು, 2 ಕಡೆ ಸ್ಟಂಟ್ ಅಳವಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರು ನಡೆಸಿದ ಸೂಕ್ಷ್ಮ ಪರೀಕ್ಷೆಯಲ್ಲಿ ಹೃದಯದ ಎರಡು ಕಡೆ ಬ್ಲಾಕೇಜ್ ಇರುವುದಾಗಿ ಪತ್ತೆಯಾಗಿದೆ. ತಕ್ಷಣವೇ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಬ್ಲಾಕೇಜ್ ತೆರವುಗೊಳಿಸಲಾಗಿದೆ. ಚಿಕಿತ್ಸೆ ನಂತರ ಶಾಸಕ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.








