ಚಿತ್ರದುರ್ಗ: ಹೊನ್ನೇಕೆರೆ ಗೊಲ್ಲರಹಟ್ಟಿ (ಅಮರಾವತಿ ಗೊಲ್ಲರಹಟ್ಟಿ) ಗ್ರಾಮದ ಆರಾಧ್ಯ ದೈವಗಳಾದ ಶ್ರೀ ಮೇಲುಕುಂಟೆ ರಂಗನಾಥ ಸ್ವಾಮಿ, ಶ್ರೀ ಮಲೆಯಾಂಬಿಕೆ ದೇವಿ ಹಾಗೂ ಬ್ಯಾಡರಹಳ್ಳಿ ತಿಮ್ಮಪ್ಪ ಮತ್ತು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿರುಪತಿ ತಿಮ್ಮಪ್ಪನ ದಿವ್ಯ ಆಶೀರ್ವಾದದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಐದು ದಿನಗಳ ‘ಕುಟುಂಬ ಯಾತ್ರಾ ಪ್ರವಾಸ’ವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂಬುದಾಗಿ ಕಾಡುಗೊಲ್ಲರ ಜನಪದ ಸೊಗಡು ವೇದಿಕೆಯ ಸಂಸ್ಥಾಪಕ ಪ್ರವೀಣ್ ಕುಮಾರ್.ಹೆಚ್.ಡಿ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸುಮಾರು 15 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ನೆಂಟರಿಷ್ಟರೆಲ್ಲರೂ ಸೇರಿ ಕೈಗೊಂಡಿದ್ದ ಈ ಯಾತ್ರೆಯು ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಿತ್ತು. ಯಾತ್ರೆ ಮುಗಿಸಿ ಮರಳಿದ ಭಕ್ತಾದಿಗಳನ್ನು ಸಂಪ್ರದಾಯದಂತೆ ಊರಿನ ಹೊರವಲಯದಲ್ಲಿರುವ ಅರಳಿಹಳ್ಳಿ ಕೆರೆ ಅಂಗಳದಲ್ಲಿ ಸ್ವಾಗತಿಸಲಾಯಿತು. ಅಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ತಿಮ್ಮಪ್ಪ ಸ್ವಾಮಿಯ ‘ಬಿಲ್ಲು ಗೂಡು’ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಾಗೂ ಆಗಮಿಸಿದ್ದ ನೂರಾರು ಭಕ್ತಾದಿಗಳಿಗೆ ಅನ್ನದಾಸೋಗ ವ್ಯವಸ್ಥೆ ಮಾಡಲಾಗಿತ್ತು ಎಂದಿದ್ದಾರೆ.
ಅನ್ನಪ್ರಸಾದ ಸ್ವೀಕರಿಸಿದ ನಂತರ, ಭಕ್ತಾದಿಗಳು ಅರಳಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೈವ ಶ್ರೀ ಮಲೆಯಾಂಬಿಕೆ ದೇವಿಯ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕುಲದೈವಗಳಾದ ಶ್ರೀ ಮೇಲುಕುಂಟೆ ರಂಗನಾಥ ಸ್ವಾಮಿ ಹಾಗೂ ಬ್ಯಾಡರಹಳ್ಳಿ ತಿಮ್ಮಪ್ಪನ ನಾಮಸ್ಮರಣೆಯೊಂದಿಗೆ ಭಕ್ತಾದಿಗಳು ಮೆರವಣಿಗೆಯ ಮೂಲಕ ಹೊನ್ನೇಕೆರೆ ಗೊಲ್ಲರಹಟ್ಟಿ ಗ್ರಾಮವನ್ನು ಪ್ರವೇಶಿಸಿದರು ಎಂದು ತಿಳಿಸಿದ್ದಾರೆ.
ದಶಕಗಳ ನಂತರ ಗ್ರಾಮದ ಬಂಧು-ಬಳಗದವರೆಲ್ಲರೂ ಒಂದಾಗಿ ಕೈಗೊಂಡ ಈ ಭಕ್ತಿ ಕಾರ್ಯವು ಊರಿನ ಒಗ್ಗಟ್ಟಿಗೆ ಸಾಕ್ಷಿಯಾಯಿತು. ಆ ಮೂಡಲಗಿರಿ ತಿಮ್ಮಪ್ಪ ಹಾಗೂ ನಮ್ಮೂರಿನ ದೈವಗಳು ಗ್ರಾಮಸ್ಥರೆಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಗ್ರಾಮದ ಹಿರಿಯರು ಈ ಸಂದರ್ಭದಲ್ಲಿ ಹಾರೈಸಿದ್ದಾಗಿ ತಿಳಿಸಿದ್ದಾರೆ.
ವರದಿ: ಶಶಿ ಬಿ ಈಶ್ವರಗೆರೆ, ಚಿತ್ರದುರ್ಗ
ಬೆಂಗಳೂರು ಏರ್‌ಪೋರ್ಟ್‍ನಲ್ಲಿ ಡ್ರೋನ್ ಹಾರಾಟ: ಯೂಟ್ಯೂಬರ್ ವಿರುದ್ಧ FIR ದಾಖಲು
ಸಾಗರದಲ್ಲಿ ಅರಣ್ಯ ಜಮೀನು ತೆರವು ನೋಟೀಸ್: ತಮ್ಮದೇ ಸರ್ಕಾರದ ವಿರುದ್ದ ಕೆಡಿಪಿ ಸದಸ್ಯ ಅಸಮಾಧಾನ








