ಮಂಗಳೂರು : ಕಳೆದ 5 ವರ್ಷದ ಹಿಂದೆ ಮಂಗಳೂರಲ್ಲಿ 7 ವರ್ಷ 7 ತಿಂಗಳಿನ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಇಡೀ ಸಮಾಜ ತಲೆತಗ್ಗಿಸುವಂತಹ ಕೆಲಸ ಮಾಡಿದ ಮೂವರು ಅಪರಾಧಿಗಳು, ಮತ್ತೆ ಶಿಕ್ಷೆ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದಾಗ ಛೀಮಾರಿ ಹಾಕಿದ ಕೋರ್ಟ್, ಗಲ್ಲುಶಿಕ್ಷೆಯನ್ನು ಕಾಯಂಗೊಳಿಸಿದೆ.
ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಕಾಯಂಗೊಳಿಸಲು ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿ, ಶಿಕ್ಷೆ ರದ್ದು ಕೋರಿ ಅಪರಾಧಿಗಳಾದ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜೈಬನ್ ಆದಿವಾಸಿ ಅಲಿಯಾಸ್ ಜಯಸಿಂಗ್ ಮುಖೇಶ್ ಸಿಂಗ್, ಮುಖೇಶ್ ಸಿಂಗ್ ತಿರ್ಕಿ ಮತ್ತು ಜಾರ್ಖಂಡ್‌ನ ರಾಂಚಿಯ ಮನೀಶ್ ತಿರ್ಕಿ ಎಂಬುವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಮತ್ತು ನ್ಯಾಯಮೂರ್ತಿ ವೆಂಟಕೇಶ್ ಟಿ.ನಾಯ್ಕ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ದಾಖಲೆಗಳನ್ನು ಪರಿಶೀಲಿಸಿದ ನಂತರ ವಿಚಾರಣಾ ನ್ಯಾಯಾಲಯ ವಿಧಿಸಿರುವ ಗಲ್ಲುಶಿಕ್ಷೆ ಕಾಯಂಗೊಳಿಸಿ, ಶಿಕ್ಷೆ ರದ್ದು ಕೋರಿ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ. ”ಅಪರಾಧಿಗಳು ಅಪ್ರಾಪ್ತೆಯ ಜೀವವನ್ನು ಲೆಕ್ಕಿಸದೆ ನಿರಂತರವಾಗಿ ಒಬ್ಬರ ಬಳಿಕ ಮತ್ತೊಬ್ಬರು ಅತ್ಯಾಚಾರವೆಸಗಿದ್ದು, ಇದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘೋರ ಅಪರಾಧ ಕೃತ್ಯವಾಗಿದೆ.
ಅಂತಹ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದರೆ, ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗಲಿದೆ. ಬಾಲಕಿಯನ್ನು ಕಾಮುಕ ಕೃತ್ಯಕ್ಕೆ ಬಳಸಿರುವುದನ್ನು ಪ್ರೋತ್ಸಾಹಿಸಿದಂತಾಗಲಿದೆ” ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅಪರಾಧಿಗಳಿಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ಕಾಯಂಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.








