ಮೈಸೂರು: ಜಗತ್ತಿನ ವಿವಿಧ ದೇಶಗಳ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ‘ಪರಿದೃಶ್ಯ–2026’ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ದಸರಾ ನಗರಿ ಮೈಸೂರು ಸಜ್ಜಾಗುತ್ತಿದೆ. ಫೆಬ್ರವರಿ 20ರಿಂದ 22ರವರೆಗೆ ಐತಿಹಾಸಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಉತ್ಸವ ನಡೆಯಲಿದೆ.
ಮೈಸೂರು ಸಿನಿಮಾ ಸೊಸೈಟಿ (ಎಂಸಿಎಸ್) ಆಯೋಜಿಸಿರುವ ಈ ನಾಲ್ಕನೇ ಆವೃತ್ತಿಯ ಉತ್ಸವದಲ್ಲಿ ಭಾರತ ಸೇರಿದಂತೆ 114 ದೇಶಗಳಿಂದ ಆಯ್ಕೆಯಾದ ಕಿರುಚಿತ್ರಗಳು ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ. ಪ್ರೇಕ್ಷಕರ ಹೆಚ್ಚಿನ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಬಾರಿ ವಿಶಾಲ ಸ್ಥಳವನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
‘ಪರಿದೃಶ್ಯ’ ಉತ್ಸವವು ವರ್ಷದಿಂದ ವರ್ಷಕ್ಕೆ ಯಶೋಗಾಥೆ ಬರೆಯುತ್ತಿದೆ. ಮೊದಲ ಆವೃತ್ತಿಯಲ್ಲಿ 10 ದೇಶಗಳಿಂದ 150 ಚಿತ್ರಗಳು ಪ್ರದರ್ಶನಗೊಂಡಿದ್ದರೆ, ಮೂರನೇ ಆವೃತ್ತಿಯಲ್ಲಿ 109 ದೇಶಗಳಿಂದ 3,100ಕ್ಕೂ ಹೆಚ್ಚು ಚಿತ್ರಗಳು ಭಾಗವಹಿಸಿದ್ದವು. 2026ರ ಆವೃತ್ತಿಗೆ 114 ದೇಶಗಳಿಂದ 3,000ಕ್ಕೂ ಅಧಿಕ ಚಿತ್ರಗಳ ಭಾಗವಹಿಸುವಿಕೆಗೆ ಪ್ರಸ್ತಾವನೆಗಳು ಬಂದಿರುವುದು ಕುತೂಹಲಕಾರಿ ಬೆಳವಣಿಗೆ.
ಉತ್ಸವ ನಿರ್ದೇಶಕಿ ಹಾಗೂ ಮೈಸೂರು ಸಿನಿಮಾ ಸೊಸೈಟಿಯ ಗೌರವ ಕಾರ್ಯದರ್ಶಿ ಪದ್ಮಾವತಿ ಎಸ್. ಭಟ್ ಅವರು ‘ಪರಿದೃಶ್ಯ’ ಕುರಿತಂತೆ ಮಹತ್ವದ ಸಂಗತಿಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ‘ಕ್ಷಕರು, ವಿದ್ಯಾರ್ಥಿಗಳು ಹಾಗೂ ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರಿಗೆ ಕಲಿಕೆಯ ಜೊತೆಗೆ ಸಾಂಸ್ಕೃತಿಕ ಅನುಭವ ನೀಡುವ ಉದ್ದೇಶದಿಂದ ‘ಪರಿದೃಶ್ಯ’ ರೂಪಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಉತ್ಸವದ ಭಾಗವಾಗಿ
* ಕ್ಯುರೇಟೆಡ್ ಭಾರತೀಯ ಮತ್ತು ಅಂತರರಾಷ್ಟ್ರೀಯ ಚಿತ್ರ ಪ್ರದರ್ಶನಗಳು
* ಚಿತ್ರೋದ್ಯಮ ತಜ್ಞರಿಂದ ಮಾಸ್ಟರ್ ಕ್ಲಾಸ್‌ಗಳು
* ಫಲಕ ಚರ್ಚೆಗಳು ಮತ್ತು ವಿದ್ಯಾರ್ಥಿಗಳ ಸಂವಾದ
* ಕಲೆ ಹಾಗೂ ಸಾಂಸ್ಕೃತಿಕ ಅನುಭವಗಳು
* ಆಹಾರ ಮಳಿಗೆಗಳು ಮತ್ತು ಪ್ರದರ್ಶನಗಳು
* ಸಂಗೀತ ರಾತ್ರಿಗಳು
* ಪ್ರಶಸ್ತಿಪ್ರದಾನ ಸಮಾರಂಭಗಳು ನೆರವೇರಲಿವೆ.
ಸಿನಿಮಾವನ್ನು ಕಲಾ ಮಾಧ್ಯಮ ಮತ್ತು ಸಾಮಾಜಿಕ ಅಭಿವ್ಯಕ್ತಿಯ ರೂಪವಾಗಿ ಉತ್ತೇಜಿಸುವ ಗುರಿಯೊಂದಿಗೆ ಆಯೋಜಿಸಲಾಗಿರುವ ‘ಪರಿದೃಶ್ಯ–2026’ ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಸಿನಿಮಾ ಪ್ರೇಮಿಗಳ ಪಾಲಿಗೆ ವೈಭವದ ಹಬ್ಬದಂತಾಗಲಿದೆ. ಅದಕ್ಕೆ ತಕ್ಕಂತೆ ಸಿದ್ಧತೆಯೂ ಜೋರಾಗಿ ನಡೆದಿದೆ.








