ಕೊಪ್ಪಳ : ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಿಗೆಮ್ಮ ತಮ್ಮ ಹೆಸರಲ್ಲಿರುವ ಜಮೀನನ್ನು ಸರ್ಕಾರಿ ಶಾಲೆಗೆ ನೀಡಿ ಮಾದರಿಯಾಗಿದ್ದಾರೆ.
ಹೌದು, ಕನಕಗಿರಿ ವಿಧಾನಸಭಾ ಕ್ಷೇತ್ರದ ನವಲಿ ಹೋಬಳಿಯ ಆದಾಪುರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಸರಿಯಾದ ಶೈಕ್ಷಣಿಕ ಸೌಲಭ್ಯಗಳು ಇಲ್ಲದಿರುವುದನ್ನು ಗಮನಿಸಿದ ಹುಲಿಗೆಮ್ಮ, ತಮ್ಮ ಹೆಸರಲಿದ್ದ ಒಂದು ಎಕರೆ ಜಮೀನು ದಾನ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿದ್ದಾರೆ.
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಆದಾಪುರ ಸಿಮಾದ ಸರ್ವೆ ನಂ. 86/1/9ರಲ್ಲಿನ 1 ಎಕರೆ ಭೂಮಿಯನ್ನು ಶಾಲೆಗೆ ದಾನ ನೀಡಿದ್ದು, ಈ ಭೂಮಿಯನ್ನು ವರ್ಷದ ಹಿಂದೆ ಸಚಿವ ತಂಗಡಗಿ ಅವರ ತಾಯಿ ಹುಲಿಗೆಮ್ಮ ಅವರು ₹9.50 ಲಕ್ಷ ಕೊಟ್ಟು ಖರೀದಿಸಿದ್ದರು. ಇದೀಗ ಈ ಭೂಮಿಯನ್ನು ಶಾಲೆಗೆ ನೀಡುವ ಮೂಲಕ ಬಡ ಮಕ್ಕಳಿಗೆ ಆಸರೆಯಾಗಿದ್ದಾರೆ.
ಹಲವು ವರ್ಷಗಳಿಂದಲೂ ಆದಾಪುರದಲ್ಲಿ ಶಾಲೆ ಇದ್ದರೂ ಜಾಗದ ಕೊರತೆ ಇತ್ತು. ಇದೀಗ ಸಚಿವರ ತಾಯಿ ಹುಲಿಗೆಮ್ಮ ಬಿಇಒ ನಟೇಶ್ ಅವರೊಂದಿಗೆ ಕಾರಟಗಿಯ ನೋಂದಣಿ ಕಚೇರಿಗೆ ತೆರಳಿ ಭೂಮಿಯನ್ನು ರಾಜ್ಯಪಾಲರ ಹೆಸರಿಗೆ ವರ್ಗಾವಣೆ ಮಾಡಿಸಿದ್ದಾರೆ.








