ವಿಜಯನಗರ : ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ತ್ರಿಬಲ್ ಮರ್ಡರ್ ಕೊಲೆ ಪ್ರಕರಣಕ್ಕೆ ಇದೀಗ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು ತನಿಖೆಯ ವೇಳೆ ಆರೋಪಿಯಾಗಿರುವ ಅಕ್ಷಯ್ ಪೊಲೀಸರ ಮುಂದೆ ಕೊಲೆ ಮಾಡುವುದಕ್ಕೆ ನಿಜವಾದ ಕಾರಣ ಬಾಯಿಬಿಟ್ಟಿದ್ದಾನೆ. ಆರೋಪಿ ಅಕ್ಷಯ್ ಕೊಲೆ ಮಾಡಿದ್ದು ಮೂವರನ್ನಲ್ಲ, ಬದಲಿಗೆ ನಾಲ್ವರನ್ನು ಎಂಬುದು ಬೆಳಕಿಗೆ ಬಂದಿದೆ. ಜತೆಗೆ, ಇದು ದ್ವೇಷದ ಕೊಲೆಯಲ್ಲ, ಮರ್ಯಾದಾ ಹತ್ಯೆ ಎಂಬುದೂ ಗೊತ್ತಾಗಿದೆ.
ಹೌದು ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಕ್ಷಯ್, ತಂಗಿಯ ಪ್ರೇಮ ಪ್ರಕರಣ ಮತ್ತು ಆಕೆ ಗರ್ಭಿಣಿಯಾಗಿರುವುದು ತಿಳಿದು ಮರ್ಯಾದಾ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ತಂಗಿಗೆ ಬೆಂಬಲ ನೀಡಿದ ತಂದೆ, ತಾಯಿಯನ್ನೂ ಕೊಲೆ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿರುವ ಅಕ್ಷಯ್, ಇದು ಕೇವಲ ದ್ವೇಷದ ಕೊಲೆಯಲ್ಲ, ಕುಟುಂಬದ ಗೌರವ ಉಳಿಸಿಕೊಳ್ಳಲು ಮಾಡಿದ ಕೃತ್ಯ ಎಂದು ಹೇಳಿಕೊಂಡಿದ್ದಾನೆ.
ನಾಲ್ಕು ತಿಂಗಳ ಹಿಂದೆ ಅಕ್ಷಯ್ ತಂಗಿಯ ಮೊಬೈಲ್ ಪರಿಶೀಲಿಸಿದ ವೇಳೆ ಪಿಯುಸಿ ಓದುತ್ತಿದ್ದ ಯುವಕನೊಂದಿಗೆ ಅವಳು ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಬಳಿಕ ಆ ಯುವಕನಿಗೆ ಕರೆ ಮಾಡಿದ ಅಕ್ಷಯ್, ಇಬ್ಬರ ನಡುವೆ ಪ್ರೇಮ ಸಂಬಂಧ ಇರುವುದನ್ನು ತಿಳಿದುಕೊಂಡಿದ್ದ. ಇದರಿಂದ ಕೋಪಗೊಂಡ ಅಕ್ಷಯ್ ತಂಗಿಗೆ ಹಲ್ಲೆ ಮಾಡಿ ಬೆದರಿಸಿದ್ದಾನೆ.
ಬಳಿಕ ಜನವರಿ 26ರಂದು ಅವಳು ಗರ್ಭಿಣಿಯಾಗಿದ್ದಾಳೆ ಎಂಬ ವಿಚಾರ ಹೊರಬಿದ್ದಿದೆ.ಈ ವಿಷಯವನ್ನು ತಾಯಿ ಅಕ್ಷಯ್‌ಗೆ ತಿಳಿಸಿದ್ದರಿಂದ ಆತ ಇನ್ನಷ್ಟು ಕೋಪಗೊಂಡಿದ್ದಾನೆ. ಗರ್ಭಪಾತ ಮಾಡಿಸೋಣ ಎಂದು ಅಕ್ಷಯ್ ಹೇಳಿದ್ದರೂ, ತಂದೆ-ತಾಯಿ ಅದಕ್ಕೆ ಒಪ್ಪಿರಲಿಲ್ಲ. ಇದರಿಂದ ತನ್ನ ಮಾತಿಗೆ ಬೆಲೆ ಇಲ್ಲವೆಂದು ಭಾವಿಸಿದ ಅಕ್ಷಯ್, ತಂಗಿಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಾನೆ.
ಜನವರಿ 26ರಂದು ಮೊದಲು ಅಕ್ಷಯ್ ತನ್ನ ತಾಯಿಯನ್ನು ಕೊಂದಿದ್ದಾನೆ. ಕೊಲೆ ಬಳಿಕ ಸ್ನಾನ ಮಾಡಿ ರಕ್ತಸಿಕ್ತ ಬಟ್ಟೆಗಳನ್ನು ನಾಶಪಡಿಸಿದ್ದಾನೆ. ಸಂಜೆ ತಂಗಿ ಮನೆಗೆ ಬಂದಾಗ ಆಕೆಯನ್ನೂ ಹತ್ಯೆ ಮಾಡಿ, ತಾಯಿಯ ಮೃತದೇಹದ ಪಕ್ಕದಲ್ಲೇ ಮಲಗಿಸಿದ್ದಾನೆ.ರಾತ್ರಿ 10.30ರ ಸುಮಾರಿಗೆ ಕುಡಿದು ಮನೆಗೆ ಬಂದ ತಂದೆ ಸೋಫಾದ ಮೇಲೆ ಕೂತಿದ್ದಾಗ, ಅಕ್ಷಯ್ ಅವರ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾನೆ. ತಂದೆಯ ಮೃತದೇಹವನ್ನೂ ತಾಯಿ ಹಾಗೂ ತಂಗಿಯ ಪಕ್ಕ ಇಟ್ಟಿದ್ದಾನೆ.
ಈ ಸಂದರ್ಭದಲ್ಲಿ ಅಕ್ಷಯ್ ತನ್ನ ಮಾವ ವಸಂತನನ್ನು ಭೇಟಿ ಮಾಡಿ ಎಲ್ಲ ವಿಚಾರ ತಿಳಿಸಿದ್ದಾನೆ. ಶವಗಳನ್ನು ಹೂತು ‘ಮಿಸ್ಸಿಂಗ್’ ನಾಟಕ ಆಡೋಣ ಎಂಬ ಐಡಿಯಾ ಮಾವನೇ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ ಜನವರಿ 27ರ ರಾತ್ರಿ ಕೊಟ್ಟೂರಿಗೆ ವಾಪಸ್ ಆಗಿದ್ದ ಅಕ್ಷಯ್, ಟೈಲ್ಸ್ ಕಟರ್ ಹಾಗೂ ಡ್ರಿಲ್ಲಿಂಗ್ ಯಂತ್ರ ತರಿಸಿ, 5×5 ಅಳತೆಯ ಗುಂಡಿ ತೋಡಿ ಮೂವರ ಶವಗಳನ್ನು ಹೂತಿದ್ದಾನೆ.








