ಶಿವಮೊಗ್ಗ: ದಿನಾಂಕ 03-02-2026 ರಿಂದ 11-02-2026ರವರೆಗೆ ಸಾಗರದಲ್ಲಿ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ಸಾಗರದ ಕೆಲ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಅಲ್ಲದೇ ಈ ಮಾರ್ಗ ಬದಲಾವಣೆ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕಳವಕಟ್ಟಿ ಆದೇಶಿಸಿದ್ದಾರೆ.
ಇಂದು ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ಅವರು, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ದಿನಾಂಕ:03.02.2026 ರಿಂದ 11.02.2026 ರವರೆಗೆ ಸಾಗರ ಪಟ್ಟಣ ವ್ಯಾಪ್ತಿಯಲ್ಲಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯು 9 ದಿನಗಳ ಕಾಲ ನಡೆಯಲಿದ್ದು, ಈ ಜಾತ್ರೆಗೆ ಪ್ರತಿ ದಿನ ಅಂದಾಜು 80 ಸಾವಿರದಷ್ಟು ಭಕ್ತಾದಿಗಳು, ಸಾರ್ವಜನಿಕರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸೇರುವ ಸಾಧ್ಯತೆ ಇರುತ್ತದೆ. ಪ್ರತಿನಿತ್ಯ ಪೂಜಾ ಕಾರ್ಯಕ್ರಮಗಳು ಮತ್ತು ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿರುತ್ತವೆ. ಹಾಗೂ ಮಾರಿಕಾಂಬಾ ಕಲಾ ಮಂಟಪದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಶ್ರೀ ಮಾರಿಕಾಂಬಾ ದೇವಿ ಜಾತ್ರೆಯ ಸಮಿತಿಯವರು ಹಮ್ಮಿಕೊಂಡಿರುತ್ತಾರೆ. ಜಾತ್ರಾ ಸಮಯದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳು ನಡೆಯಲಿದ್ದು ಮತ್ತು ಜಾತ್ರೆ ವೇಳೆ ರಸ್ತೆ ಮಾರ್ಗದಲ್ಲಿ ಬೇರೆ ಬೇರೆ ಊರುಗಳಿಂದ ಬಂದ ಅಂಗಡಿ, ಅಮ್ಯೂಸ್‌ಮೆಂಟ್‌ಗಳು, ಯಕ್ಷಗಾನ, ನಾಟಕಗಳು, ವಸ್ತು ಪ್ರದರ್ಶನಗಳು ಇರುತ್ತವೆ ಎಂದಿದ್ದಾರೆ.
ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ಅನುಕೂಲವಾಗುವಂತೆ, ಸಾಗರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ ಮತ್ತು ಮಾರ್ಗ ಬದಲಾವಣೆ ಕುರಿತು ಈ ಕೆಳಕಂಡಂತೆ ತಾತ್ಕಾಲಿಕ ಅಧಿಸೂಚನೆಯನ್ನು ಹೊರಡಿಸಬೇಕಾಗಿ ಉಲ್ಲೇಖದಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಸಲ್ಲಿಕೆಯಾದ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಹಿತ ದೃಷ್ಠಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988 ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221(ಎ)(5) ರನ್ವಯ ದಿನಾಂಕ:03.02.2026 ರಿಂದ 11.02.2026 ರವರೆಗೆ ಈ ಕೆಳಕಂಡ ರಸ್ತೆ ಮಾರ್ಗಗಳಲ್ಲಿ ತಾತ್ಕಾಲಿ ಲಿಕವಾಗಿ ದ್ವಿಚಕ್ರ, ಲಘು ವಾಹನಗಳು ಮತ್ತು ಭಾರಿ ವಾಹನಗಳ ಸಂಚಾರ ನಿಷೇಧ, ನಿಲುಗಡೆ, ಮಾರ್ಗ ಬದಲಾವಣೆ
ಮಾಡಿ ಆದೇಶಿಸಿದ್ದಾರೆ.
ಸಾಗರ ಮಾರಿಕಾಂಬ ಜಾತ್ರೆ ಪ್ರಯುಕ್ತ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ
ಸಾಗರ ಟೌನ್ ಪೊಲೀಸ್ ಠಾಣೆಯ ಎದುರಿನ ಜೆ.ಸಿ. ವೃತ್ತದಿಂದ ಜೆ.ಸಿ. ರಸ್ತೆ ಮೂಲಕ ಸಾಗರ ಸರ್ಕಲ್ ಮಾರ್ಗವಾಗಿ ಐತಪ್ಪ ವೃತ್ತದ ವರೆಗೆ ಪ್ಯಾರಲಲ್ ರಸ್ತೆಗಳು ಸೇರಿದಂತೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಅಂಬೇಡ್ಕರ್ ಸರ್ಕಲ್ (ಲಿಂಬು ಸರ್ಕಲ್) ನಿಂದ ಸಾಗರ ಸರ್ಕಲ್ ವರೆಗೆ ವಾಹನ ಸಂಚಾರ ನಿಷೇಧ. 3. ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಸರ್ಕಲ್‌ನಿಂದ ಸಾಗರ ಸರ್ಕಲ್ ವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ.
ಸಾಗರದ ಮಾರಿಕಾಂಬ ಜಾತ್ರೆ ಹಿನ್ನಲೆಯಲ್ಲಿ ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ
ದುರ್ಗಾಂಬ ವೃತ್ತ (ಸೊರಬ ಸರ್ಕಲ್) ಮೂಲಕ ಸೊರಬ ರಸ್ತೆ, ಮಾರ್ಕೆಟ್ ರಸ್ತೆ ಮೂಲಕ ಎಸ್.ಎನ್. ವೃತ್ತದವರೆಗೆ ಎಲ್ಲಾ ಮಾದರಿ ವಾಹನ ನಿಲುಗಡೆ ನಿಷೇಧ.
ದುರ್ಗಾಂಬ ವೃತ್ತ (ಸೊರಬ ಸರ್ಕಲ್) ಮೂಲಕ ಸೊರಬ ರಸ್ತೆ, ಮಾರ್ಕೆಟ್ ರಸ್ತೆ ಮೂಲಕ ಎಸ್.ಎನ್. ವೃತ್ತದವರೆಗೆ (ಬೆಳಿಗ್ಗೆ 10-00 ಗಂಟೆಯಿಂದ ರಾತ್ರಿ 12-00 ಗಂಟೆಯವರೆಗೆ ಎಲ್ಲಾ ಮಾದರಿಯ ಸರಕು ವಾಹನಗಳ ಸಂಚಾರ ನಿಷೇಧ)
ಸರ್ಕಾರಿ ಆಸ್ಪತ್ರೆಯ ಹಿಂದಿನ ಗೇಟ್‌ನಿಂದ ಚರ್ಚ್ ಪಕ್ಕದ ರಸ್ತೆ ಮತ್ತು ಖಚಾನ ರಸ್ತೆಗಳು, ಬಿ.ಹೆಚ್ ರಸ್ತೆ ವರೆಗೆ ವಾಹನ ನಿಲುಗಡೆ ನಿಷೇಧ (ಆಸ್ಪತ್ರೆಗೆ ಬರುವ ವಾಹನ ಮತ್ತು ಅಂಬ್ಯೂಲೆನ್ಸ್ ಸುಗಮ ಸಂಚಾರಕ್ಕೆ ಅನೂಕೂಲಕ್ಕಾಗಿ )
ಸಾಗರದ ಈ ಸ್ಥಳದಲ್ಲಿ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ
ವರದಹಳ್ಳಿ ಕ್ರಾಸ್‌ನಿಂದ ಹಂಪಯ್ಯನ ಕೊಳದ ವರೆಗೆ ದಿನಾಂಕ:03-02-2026 ರಿಂದ 20-02-2026 ವವರೆಗೆ (ಜಾತ್ರೆ ಅವಧಿಯಲ್ಲಿ ) ಎನ್ ಹೆಚ್-69 ಬಿ.ಹೆಚ್ ರಸ್ತೆಯಲ್ಲಿ ಸರದಿಯಂತೆ ಲಘು 04 ಚಕ್ರದ ವಾಹನ ಮತ್ತು ದ್ವಿಚಕ್ರವಾಹನ ಪಾರ್ಕಿಂಗ್‌ಗೆ ಅವಕಾಶ.
ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತೀಗಣ್ಯ ವ್ಯಕ್ತಿಗಳ ವಾಹನಗಳು, ಅಂಬ್ಯುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳ ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಿರುತ್ತದೆ. ಈ ಅಧಿಸೂಚನೆಯನ್ನು ದಿನಾಂಕ: 30.01.2026 ರಂದು ಹೊರಡಿಸಿದೆ ಎಂಬುದಾಗಿ ಶಿವಮೊಗ್ಗ ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು









