ರಾಯಚೂರು / ಬೆಳಗಾವಿ : ರಾಜ್ಯದಲ್ಲಿ ನಿನ್ನೆ ಒಂದೇ ದಿನ ಪ್ರತ್ಯೇಕ ಘಟನೆಗಳಲ್ಲಿ ವಿದ್ಯುತ್ ತಂತಿ ತಗುಲಿ ಓರ್ವ ವಿದ್ಯಾರ್ಥಿ ಹಾಗೂ ಮಹಿಳೆ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ಹಾಗೂ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡೆದಿದೆ.
ವಿದ್ಯಾರ್ಥಿನಿ ಸಾವು!
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕುರಕುಂದಿ ಗ್ರಾಮದಲ್ಲಿ ವಿದ್ಯುತ್ ತಗುಲಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು ಕುರಕುಂದಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ತನುಶ್ರೀ ಶ್ಯಾಮಣ್ಣ ಭಜಂತ್ರಿ ಎಂದು ಗುರುತಿಸಲಾಗಿದೆ.
ಶಾಲೆಯಲ್ಲಿ ಬೆಳಿಗ್ಗೆ 11.30ಕ್ಕೆ ವಿರಾಮ ಸಮಯದಲ್ಲಿ ಕುಡಿಯಲು ನೀರು ತರಲು ತೆರಳಿದ್ದ ವೇಳೆ ವಿದ್ಯುತ್ ತಗುಲಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣವೇ ವಿದ್ಯಾರ್ಥಿನಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಬಳಿಕ ತುರುವಿಹಾಳ ಪೊಲೀಸ್ ಠಾಣೆಯ ಪಿಎಸ್‌ಐ ಸುಜಾತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಿಳೆ ಸಾವು!
ಅದೇ ರೀತಿ ಮತ್ತೊಂದು ಘಟನೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಖೋತನಹಟ್ಟಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ವೈಷ್ಣವಿ ಮೋಹನ ಮೋರೆ (25) ಮೃತಪಟ್ಟ ಘಟನೆ ನಡೆದಿದೆ. ಪಂಪ್‌ಸೆಟ್ ಮೂಲಕ ಮನೆಗೆ ನೀರು ತುಂಬಿಕೊಳ್ಳಲು ಮೋಟರ್ ಆರಂಭಿಸಲು ಹೋದಾಗ ವಿದ್ಯುತ್ ತಗುಲಿದ್ದ ವೈಷ್ಣವಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದಾರೆಂದು ಪ್ರಕರಣ ದಾಖಲಿಸಿಕೊಂಡಿರುವ ಐಗಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.








