ಸುಪ್ರೀಂಕೋರ್ಟ್ನ ನಿರ್ದೇಶನದ ಮೇರೆಗೆ ನ್ಯಾಯಾಂಗ ಬಂಧನದಲ್ಲಿದ್ದಾಗ ಅವರ ಆರೋಗ್ಯ ಹದಗೆಟ್ಟ ನಂತರ ಸಾಮಾಜಿಕ ಕಾರ್ಯಕರ್ತ ಮತ್ತು ವಿಜ್ಞಾನಿ ಸೋನಮ್ ವಾಂಗ್ಚುಕ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಜೋಧಪುರದ ಏಮ್ಸ್ ಗೆ ಕರೆದೊಯ್ಯಲಾಯಿತು.
ಪೊಲೀಸರು ಶನಿವಾರ (ಜನವರಿ 31) ಮುಂಜಾನೆ 6.30 ರ ಸುಮಾರಿಗೆ ಜೋಧಪುರ ಕೇಂದ್ರ ಕಾರಾಗೃಹದಿಂದ ವಾಂಗ್ಚುಕ್ ಅವರನ್ನು ಏಮ್ಸ್ ನ ತುರ್ತು ವಾರ್ಡ್ ಗೆ ಕರೆತಂದರು. ಅವರನ್ನು ಸುಮಾರು ಒಂದೂವರೆ ಗಂಟೆಗಳ ಕಾಲ ವೀಕ್ಷಣೆಯಲ್ಲಿ ಇರಿಸಲಾಯಿತು ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್ ಪರೀಕ್ಷೆಗೆ ಒಳಪಡಿಸಿದರು.
ಏಮ್ಸ್ ಮೂಲಗಳ ಪ್ರಕಾರ, ವಾಂಗ್ಚುಕ್ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮತ್ತು ಅವರ ದೇಹದ ಹಲವಾರು ಭಾಗಗಳಲ್ಲಿ ನೋವು ಕಾಣುತ್ತಿದೆ ಎಂದು ದೂರು ನೀಡಿದ್ದಾರೆ. ಒಂದು ದಿನದ ಹಿಂದೆಯೂ ಅವರನ್ನು ವೈದ್ಯಕೀಯ ಪರೀಕ್ಷೆಗಳಿಗಾಗಿ ಸಂಸ್ಥೆಗೆ ಕರೆದೊಯ್ಯಲಾಗಿತ್ತು.
ಪರೀಕ್ಷೆಯ ನಂತರ, ಅವರನ್ನು ಬಿಗಿ ಭದ್ರತೆಯಲ್ಲಿ ಜೋಧಪುರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ವಾಂಗ್ಚುಕ್ ಅವರ ಆರೋಗ್ಯದ ಬಗ್ಗೆ ಅವರ ಪತ್ನಿ ಕಳವಳ ವ್ಯಕ್ತಪಡಿಸಿದ್ದು, ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಗುರುವಾರ (ಜನವರಿ 29) ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ.ವರಾಳೆ ಅವರನ್ನೊಳಗೊಂಡ ನ್ಯಾಯಪೀಠವು ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರಿಂದ ವಾಂಗ್ಚುಕ್ ಅವರನ್ನು ಪರೀಕ್ಷಿಸುವಂತೆ ಜೈಲು ಆಡಳಿತಕ್ಕೆ ನಿರ್ದೇಶನ ನೀಡಿತು.








