ನ್ಯೂಯಾರ್ಕ್ ಸಿಟಿಯ ಮೇಯರ್ ಜೋಹ್ರಾನ್ ಮಮ್ದಾನಿ ಅವರ ತಾಯಿ, ಮೀರಾ ನಾಯರ್ ಅವರು, 2009ರಲ್ಲಿ ಬಿಡುಗಡೆಯಾದ ತಮ್ಮ ‘ಅಮೆಲಿಯಾ’ (Amelia) ಚಿತ್ರದ ಸಕ್ಸಸ್ ಪಾರ್ಟಿಗಾಗಿ, ಲೈಂಗಿಕ ಅಪರಾಧ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಗಿಸ್ಲೇನ್ ಮ್ಯಾಕ್ಸ್ವೆಲ್ ಅವರ ಮನೆಗೆ ಭೇಟಿ ನೀಡಿದ್ದರು ಎಂಬ ಆಘಾತಕಾರಿ ವಿಷಯವು ಹೊಸ ಎಪ್ಸ್ಟೀನ್ ಕಡತಗಳಿಂದ ಬಹಿರಂಗವಾಗಿದೆ.
ಅಮೆರಿಕದ ನ್ಯಾಯಾಂಗ ಇಲಾಖೆಯು ಶುಕ್ರವಾರ, ಲೈಂಗಿಕ ಅಪರಾಧದಲ್ಲಿ ಶಿಕ್ಷೆಗೊಳಗಾಗಿದ್ದ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ 2,000 ವಿಡಿಯೋಗಳು ಮತ್ತು 1,80,000 ಚಿತ್ರಗಳು ಸೇರಿದಂತೆ 30 ಲಕ್ಷಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದೆ.
ದಾಖಲೆಗಳ ನಡುವೆ, ಅಕ್ಟೋಬರ್ 21, 2009 ರಂದು ಪ್ರಚಾರಕಿ ಪೆಗ್ಗಿ ಸೀಗಲ್ ಅವರು ಜೆಫ್ರಿ ಎಪ್ಸ್ಟೀನ್ಗೆ ಕಳುಹಿಸಿದ ಇಮೇಲ್ ಕೂಡ ಪತ್ತೆಯಾಗಿದೆ. ಸೀಗಲ್ ಅವರು ಪಾರ್ಟಿಯಿಂದ ಹೊರಬಂದ ತಕ್ಷಣ, ಮುಂಜಾನೆ ಸಮಯದಲ್ಲಿ ಕಳುಹಿಸಿದ ಈ ಇಮೇಲ್, ಅಂದು ನಡೆದ ಆಫ್ಟರ್ಪಾರ್ಟಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ.
ಈ ಪಾರ್ಟಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಅಮೆಜಾನ್ ಸಿಇಒ ಜೆಫ್ ಬೆಜೋಸ್ ಕೂಡ ಭಾಗವಹಿಸಿದ್ದರು.
“ಈಗಷ್ಟೇ ಗಿಸ್ಲೇನ್ ಅವರ ಮನೆಯಿಂದ ಹೊರಬಂದೆ… ಚಿತ್ರದ ನಂತರದ ಪಾರ್ಟಿ ಅದಾಗಿತ್ತು. ಬಿಲ್ ಕ್ಲಿಂಟನ್ ಮತ್ತು ಜೆಫ್ ಬೆಜೋಸ್ ಅಲ್ಲಿ ಇದ್ದರು… ಜೀನ್ ಪಿಗೋನಿ, ನಿರ್ದೇಶಕಿ ಮೀರಾ ನಾಯರ್…. ಮುಂತಾದವರು ಇದ್ದರು,” ಎಂದು ಇಮೇಲ್ನಲ್ಲಿ ಬರೆಯಲಾಗಿದೆ.
ನಿರ್ದೇಶಕಿ ಮೀರಾ ನಾಯರ್ ಅವರ ಚಿತ್ರಕ್ಕೆ ಅತಿಥಿಗಳಿಂದ ಬಂದ ಪ್ರತಿಕ್ರಿಯೆಯನ್ನು ಇಮೇಲ್ನಲ್ಲಿ “ನೀರುಗುಳ್ಳೆಯಂತೆ” (ಉತ್ಸಾಹವಿಲ್ಲದ ಪ್ರತಿಕ್ರಿಯೆ) ಎಂದು ಬಣ್ಣಿಸಲಾಗಿದೆ.
“ಮಹಿಳೆಯರಿಗೆ ಈ ಚಿತ್ರ ಹೆಚ್ಚು ಇಷ್ಟವಾದರೂ, ಒಟ್ಟಾರೆಯಾಗಿ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಯಿತು… ಹಿಲರಿ ಸ್ವ್ಯಾಂಕ್ ಮತ್ತು ಇತರರು ಬ್ಲೂಮಿಂಗ್ಡೇಲ್ಸ್ನ ಅಗ್ಗದ ಕ್ರೀಡಾ ಉಡುಪುಗಳ ವಿಭಾಗದಲ್ಲಿ ನಡೆದ ಅವಿವೇಕದ ಪಾರ್ಟಿಯಲ್ಲಿದ್ದರು…. ಇದು ತುಂಬಾ ವಿಚಿತ್ರವಾಗಿತ್ತು. ಸ್ಟುಡಿಯೋದವರು ಅಂಗಡಿಯ ಉಚಿತ ಪಾರ್ಟಿ ಮತ್ತು ಒಂದು ತಿಂಗಳ ವಿಂಡೋ ಪ್ರದರ್ಶನಕ್ಕೆ ಒಪ್ಪಿಕೊಂಡರು…. ನಾಳೆ ‘ವಾಲ್ ಸ್ಟ್ರೀಟ್ 2’ ಚಿತ್ರದಲ್ಲಿ ಇರುತ್ತೇನೆ …. ಮುಂದೆ ಹೆಚ್ಚಿನ ವಿವರ ನೀಡುವೆ. ಪ್ರೀತಿಯೊಂದಿಗೆ ಪೆಗ್,” ಎಂದು ಇಮೇಲ್ನಲ್ಲಿ ತಿಳಿಸಲಾಗಿದೆ.








