ಬೆಂಗಳೂರು : ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 2,846 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದ್ದಾರೆ.
ವಿಧಾನಪರಿಷತ್ ನಲ್ಲಿ ಬಿಜೆಪಿಯ ನಿರಾಣಿ ಹಣಮಂತ್ ರುದ್ರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳೆ ನಷ್ಟ, ಪ್ರಕೃತಿ ವಿಕೋಪ, ಸಾಲಬಾಧೆ, ಆರ್ಥಿಕ ಸಂಕಷ್ಟ, ಸಾಮಾಜಿಕ, ಕೌಟುಂಬಿಕ ಕಾರಣಗಳಿಂದಾಗಿ 2023ರ ಮೇ ನಿಂದ 2025ರ ಡಿಸೆಂಬರ್ ವರೆಗೆ ಒಟ್ಟು 2,846 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
2024-25 ರಲ್ಲಿ ಹಾವೇರಿ 133,ಬೆಳಗಾವಿ 88, ಬೀದರ್ 70, ಧಾರವಾಡ 57, ಮೈಸೂರು 68, ಕಲಬುರಗಿ 85, ಮಂಡ್ಯ ಮತ್ತು ಶಿವಮೊಗ್ಗ ತಲಾ 51, ವಿಜಯಪುರ 49 ಸೇರಿ 1,178 ರೈತರು ಆತ್ಮಹತ್ಯೆಗೆ ಶರಣಾಗಿದ್ದು, ಈ ಪೈಕಿ 1,022 ಪ್ರಕರಣ ಅರ್ಹ ಎಂದು ಪರಿಗಣಿಸಿದೆ.2025-26ನೇ ಸಾಲಲ್ಲಿ ಡಿಸೆಂಬರ್31ರ ವೇಳೆಗೆ 414 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು 331 ಪ್ರಕರಣಗಳನ್ನು ಪರಿಹಾರಕ್ಕೆ ಅರ್ಹ ಪ್ರಕರಣವೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಉಪ ವಿಭಾಗಾಧಿಕಾರಿಗಳ ಸಮಿತಿಯಲ್ಲಿ ತೀರ್ಮಾನಿಸಿ ಜಿಲ್ಲಾಧಿಕಾರಿ ಮೂಲಕ ಪ್ರಸ್ತಾವನೆ ಸಲ್ಲಿಸಲಾದ 2,443 ಪ್ರಕರಣಗಳಿಗಷ್ಟೇ 5 ಲಕ್ಷ ರು. ಪರಿಹಾರ ಒದಗಿಸಲಾಗಿದೆ. 375 ಪ್ರಕರಣಗಳನ್ನು ತಿರಸ್ಕೃತವಾಗಿವೆ ಎಂದು ತಿಳಿಸಿದ್ದಾರೆ.








