ಬೆಂಗಳೂರು : ಕಾರ್ಮಿಕ ಇಲಾಖೆಯ ಜಾರಿ ಮಾಡಿರುವ ಮೂರು ಮಹತ್ವದ ಯೋಜನೆಗಳಿಗೆ ವಿಧಾನಸಭೆಯ ಕಲಾಪದಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಋತುಚಕ್ರ ರಜೆ ನೀತಿ, ಕರ್ನಾಟಕ ಪ್ಲಾಟ್‌ಫಾರಂ ಆಧಾರಿತ ಗಿಗ್ ಕಾರ್ಮಿಕರ ವಿಮಾ ಯೋಜನೆ ಹಾಗೂ ಸಂಚಾರಿ ಆರೋಗ್ಯ ಘಟಕಗಳ ಬಗ್ಗೆ ಕಲಾಪದ ವೇಳೆ ಮಾತನಾಡಿದ ಶಾಸಕಿ, ಕಾರ್ಮಿಕ ಇಲಾಖೆಯ ಕಾರ್ಯವೈಖರಿಗೆ ಧನ್ಯವಾದಗಳನ್ನು ತಿಳಿಸಿದರು.
ಸರ್ಕಾರಿ ಹಾಗೂ ನೋಂದಾಯಿತ ಕೈಗಾರಿಕೆ ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವ 18 ರಿಂದ 52 ವರ್ಷದ ಖಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಮಹಿಳಾ ಕಾರ್ಮಿಕರಿಗೆ ತಿಂಗಳಿಗೆ ಒಂದು ವೇತನ ಸಹಿತ ಋತುಚಕ್ರ ರಜೆ ನೀಡಲಾಗುತ್ತಿದೆ. ವರ್ಷದಲ್ಲಿ 12 ರಜೆಗಳನ್ನು ಸರ್ಕಾರ ನೀಡಿದೆ. ಇದೊಂದು ಐತಿಹಾಸಿಕ ನಿರ್ಣಯ ಎಂದ ಅವರು, ಇಂತಹ ಮಹತ್ವದ ರಜೆಯನ್ನು ಜಾರಿ ಮಾಡಿದ ಸರ್ಕಾರಕ್ಕೆ ಎಲ್ಲ ಮಹಿಳೆಯರ ಪರವಾಗಿ ಧನ್ಯವಾದಗಳು ಎಂದರು.
ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ
ಕಾರ್ಮಿಕ ಇಲಾಖೆ ಜಾರಿ ಮಾಡಿರುವ ಕರ್ನಾಟಕ ಪ್ಲಾಟ್‌ಫಾರಂ ಆಧಾರಿತ ಗಿಗ್ ಕಾರ್ಮಿಕರ ವಿಮಾ ಯೋಜನೆ ಕುರಿತು ನಯನಾ ಮೋಟಮ್ಮ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣಕ್ಕಾಗಿ ಈ ವಿಮಾ ಯೋಜನೆ ಜಾರಿ ಮಾಡಲಾಗಿದೆ. ನಮ್ಮ ಸರ್ಕಾರ ಗಿಗ್ ಕಾರ್ಮಿಕರನ್ನು ಗುರುತಿಸಿ ಮಹತ್ವದ ಕ್ರಮ ಜಾರಿ ಮಾಡಿದೆ. ಇಂದು ಗಿಗ್ ಕಾರ್ಮಿಕರು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
ಸಂಚಾರಿ ಆರೋಗ್ಯ ಘಟಕಕ್ಕೆ ಶ್ಲಾಘನೆ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಸೇವೆ ನೀಡುವ ಸಂಚಾರಿ ಆರೋಗ್ಯ ಘಟಕದ ಕಾರ್ಯವೈಖರಿಗೆ ಶಾಸಕರು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಮಿಕ ಇಲಾಖೆ ವತಿಯಿಂದ ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ ನೀಡಲಾಗಿದೆ. ಕಾರ್ಮಿಕರಿಗೆ ಕೆಲಸದ ಸ್ಥಳಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ನಾನೂ ನನ್ನ ಕ್ಷೇತ್ರದಲ್ಲಿ ಇಂತಹ ಆರೋಗ್ಯ ಘಟಕಗಳಿಗೆ ಚಾಲನೆ ನೀಡಿದ್ದೇನೆ. ಇದೊಂದು ಒಳ್ಳೆಯ ಕಾರ್ಯಕ್ರಮ ಎಂದರು.
ಅನುದಾನ ಕೊಡದೇ ಅನ್ಯಾಯ: ಕೇಂದ್ರದ ಬಿಜೆಪಿ ಸರ್ಕಾರದಿಂದ ಕನ್ನಡಿಗರಿಗೆ ದ್ರೋಹ – ಕಾಂಗ್ರೆಸ್ ಕಿಡಿ
ಗಣರಾಜ್ಯೋತ್ಸವದ ಪ್ರಯುಕ್ತ 2,000ಕ್ಕೂ ಹೆಚ್ಚು ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್ ಸವಾರರಿಂದ ದೇಶಾದ್ಯಂತ ರೈಡ್








