ಚಾಮರಾಜನಗರ : ಇನ್ನೇನು ಕೆಲವೇ ಗಂಟೆಗಳಲ್ಲಿ ಹಸೆಮಣೆ ಏರಿ ಮದುವೆ ಆಗಬೇಕಿದ್ದ ವರನಿಗೆ, ವಧುವಿನ ಮಾಜಿ ಲವರ್ ಚಾಕು ಇರಿದಿರುವ ಘಟನೆ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ. ತಾಲೂಕಿನ ಕುಣಗಳ್ಳಿ ಎಲ್.ರವೀಶ್ (34) ಚಾಕು ಇರಿತಕ್ಕೊಳಗಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಲ್. ರವೀಶ್ಗೆ ಕೊಳ್ಳೇಗಾಲ ತಾಲೂಕಿನ ಹೊಸ ಅಣಗಳ್ಳಿ ಗ್ರಾಮದ ಯುವತಿಯೊಬ್ಬಳ ಜೊತೆ ವಿವಾಹ ನಿಶ್ಚಯವಾಗಿ, ಕೊಳ್ಳೇಗಾಲ ಪಟ್ಟಣದ ವೆಂಕಟೇಶ್ವರ ಮಹಲ್ನಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ಆರತಕ್ಷತೆಗೆ ತೆರಳುತ್ತಿದ್ದ ಮದುಮಗನಿಗೆ ಚಾಕು ಇರಿತವಾಗಿದೆ. ಆರತಕ್ಷತೆಗೆ ತಮ್ಮ ಗ್ರಾಮದಿಂದ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳುವಾಗ ಕೊಳ್ಳೇಗಾಲದ ಎಂಜಿಎಸ್ವಿ ಕಾಲೇಜು ರಸ್ತೆಯ ಬಳಿ ವರ ತೆರಳುತ್ತಿದ್ದ ಕಾರನ್ನು ಹಿಂಬಾಲಿಸಿ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಏಕಾಏಕಿ ಹಲ್ಲೆ ನಡೆಸಿದ್ದಾರೆ.
ಎಲ್. ರವೀಶ್ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ಎಡಗೈ ತೊಳಿಗೆ ಚಾಕು ಇರಿದು ರಕ್ತಸ್ರಾವವಾಗಿದೆ.ಸದ್ಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರವೀಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರತಕ್ಷತೆಗೆ ತೆರಳುವ ವೇಳೆ ವರನನ್ನು ಅಡ್ಡಗಟ್ಟಿ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನೆಯಿಂದ ವರ ರವೀಶ್ ಕುಟುಂಬದ ಸದಸ್ಯರು ಬೆಚ್ಚಿಬಿದ್ದಿದ್ದಾರೆ. ಇಂದು ನಿಗದಿಯಾಗಿದ್ದ ಮದುವೆಯನ್ನು ವರನ ಕುಟುಂಬಸ್ಥರು ರದ್ದುಗೊಳಿಸಿದ್ದಾರೆ. ಮದುವೆಗೂ ಮೊದಲೇ ಹೀಗೆ ಆದರೆ ಮದುವೆಯ ಬಳಿಕ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ವಧು ನಯನಾಳ ಮಾಜಿ ಪ್ರಿಯಾಕರನೆ ಈ ಒಂದು ಕೃತ್ಯ ಎಸಗಿದ್ದಾನೆ ಎಂದು ದೃಢಪಟ್ಟಿದೆ. ಕಳೆದ 15 ದಿನಗಳಿಂದ ರವೀಶ್ ಗೆ ಬೆದರಿಕೆ ಕರೆ ಬರುತ್ತಿದ್ದ ಮಾಹಿತಿ ತಿಳಿದು ಬಂದಿದೆ ನಯನಾಳನ್ನು ಮದುವೆಯಾಗದಂತೆ ಕರೆ ಮಾಡಿ ಮಾಜಿ ಲವರ್ ಧಮ್ಕಿ ಹಾಕಿದ್ದ. ಹಾಗಾಗಿ ಇಂದು ನಡೆಯಬೇಕಿದ್ದ ರವೀಶ್ ನಯನಾ ವಿವಾಹ ರದ್ದು ಮಾಡಲಾಗಿದೆ.








