ಬೆಂಗಳೂರು : ಕಾಲ್ತುಳಿತ ದುರಂತ ನಡೆದ ಬಳಿಕ ಬೆಂಗಳೂರಿನಲ್ಲಿ ಇದುವರೆಗೂ ಯಾವುದೇ ದೇಶೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿಲ್ಲ. ಇದೀಗ ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಆದರೆ ಆರ್‌ಸಿಬಿ ಮ್ಯಾನೇಜ್ಮೆಂಟ್ ಇದೀಗ ಬೆಂಗಳೂರಲ್ಲಿ ಉದ್ಘಾಟನಾ ಪಂದ್ಯ ನಡೆಸಲು ಹಿಂದೇಟು ಹಾಕುತ್ತಿದೆ.
ಆದರೆ, ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ (IPL) ಪಂದ್ಯ ನೋಡೋ ಆಸೆಯಲ್ಲಿರುವ ಆರ್‌ಸಿಬಿ ಅಭಿಮಾನಿಗಳ ಕನಸು ನನಸಾಗುವ ಸಣ್ಣ ಸೂಚನೆ ಸಿಕ್ಕಿದೆ. ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನಿಂದಲೇ ಅಂಥದೊಂದು ಸುಳಿವು ಸಿಕ್ಕಿದೆ. ಇಂದು ಅಥವಾ ನಾಳೆ ಬೆಂಗಳೂರಿನಲ್ಲಿ ಆರ್‌ಸಿಬಿ (RCB) ಪಂದ್ಯಗಳನ್ನು ಆಡುತ್ತಾ, ಅಥವಾ ಬೇರೆಡೆಗೆ ಹೋಗುತ್ತಾ ಅನ್ನೋ ಅಧಿಕೃತ ವಿಚಾರ ಹೊರಬೀಳಲಿದೆ.
ಹೌದು, ಕೆಎಸ್‌ಸಿಎ ಕಳೆದ ವಾರವಷ್ಟೇ ಬೆಂಗಳೂರಿನಲ್ಲಿ ಆಡುವ ನಿರ್ಧಾರ ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಿರ್ಧಾರ ಮಾಡಲಿದೆ, ನಮ್ಮದೇನು ಇಲ್ಲ ಅನ್ನೋ ಮಾತನ್ನ ಹೇಳಿ ಆರ್‌ಸಿಬಿ ಕಡೆ ಬೊಟ್ಟು ಮಾಡಿತ್ತು. ಆದರೆ ಆರ್‌ಸಿಬಿ ಇಲ್ಲಿತನಕ ತನ್ನ ನಿರ್ಧಾರ ಬಗ್ಗೆ ಯಾವುದೇ ವಿಚಾರವನ್ನ ಅಧಿಕೃತಗೊಳಿಸಿರಲಿಲ್ಲ. ಈ ನಡುವೆ ಬಿಸಿಸಿಐ ತವರು ಮೈದಾನ ಘೋಷಣೆ ಡೆಡ್‌ಲೈನ್ ಕೂಡ ಮುಗಿದಿದೆ. ಸದ್ಯ ಆರ್‌ಸಿಬಿ ತವರು ಮೈದಾನ ಅಧಿಕೃತ ಮಾಡಲೇಬೇಕಿದೆ.
ಈ ಇಕ್ಕಟ್ಟಿನ ನಡುವೆ ಬಿಸಿಸಿಐ ಬಳಿ ಡೆಡ್ಲೈನ್ ವಿಸ್ತರಣೆಗೆ ಮನವಿ ಮಾಡಿರುವ ಆರ್‌ಸಿಬಿ ಬೆಂಗಳೂರಿನಲ್ಲಿ ಪಂದ್ಯ ಆಯೋಜನೆ ಸಂಬಂಧ ಸರ್ಕಾರದ ಜೊತೆಗೆ ಮಾತುಕತೆಗೆ ಮುಂದಾಗಿದೆ. ನೇರವಾಗಿ ಸರ್ಕಾರದ ಜೊತೆಗೆ ಚರ್ಚೆಗೆ ಆರ್‌ಸಿಬಿ ತಯಾರಿ ನಡೆಸಿದೆ. ಇಂದು ಅಥವಾ ನಾಳೆ ಒಳಗಾಗಿ ಚರ್ಚೆ ಮಾಡಿ, ಹಿಂದಿನ ದುರಂತ ಘಟನೆ ಬಳಿಕ ಆಗಿರುವ ವಿಚಾರಗಳ ಆಗುಹೋಗು ಬಗ್ಗೆ ಚರ್ಚಿಸಲಿದೆ. ಬೆಂಗಳೂರಿನಲ್ಲಿ ಪಂದ್ಯ ಆಡಬೇಕೋ ಬೇಡವೋ ಅನ್ನೋ ಅಧಿಕೃತ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ.








