ಶಿವಮೊಗ್ಗ: ಜಿಲ್ಲೆಯ ಸೊರಬ ವಿಧಾನಸಭಾ ವ್ಯಾಪ್ತಿಯ ತಾಳಗುಪ್ಪದ ಗ್ರಾಮ ಪಂಚಾಯ್ತಿಯ ಮಳಿಗೆಗಳನ್ನು ಸದ್ದಿಲ್ಲದೇ ತರಾತುರಿಯಲ್ಲಿ ಹರಾಜು ಮುಕ್ತಾಯಗೊಳಿಸಲಾಗಿದೆ. ಯಾವುದೇ ಪ್ರಚಾರವಿಲ್ಲದೇ ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆಗಳ ಹರಾಜು ಪ್ರಕ್ರಿಯೆಗಳನ್ನು ಕೊನೆಗೊಳಿಸಿದ್ದರ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ.
ಹೌದು.. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ, ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಮಳಿಗೆಗಳನ್ನು ಪ್ರಚಾರವೇ ಇಲ್ಲದೇ ಟೆಂಡರ್ ಕರೆಯಲಾಗಿದೆ. ದಿನಾಂಕ 22-01-2026ರಂದು ಟೆಂಡರ್ ಆಹ್ವಾನಿಸಿದಂತೆ ತಾಳಗುಪ್ಪ ಸಂತೆ ಸುಂಕದ ಹರಾಜು, ಹಸಿ ಮೀನು ಮಾರಾಟದ ಮೂರು ಅಂಗಡಿಗಳ ಹಕ್ಕು, 2 ಒಣ ಮೀನಿನ ಅಂಗಡಿ, ಕಸಾಯಿ ಅಂಗಡಿ ನಡೆಸೋದಕ್ಕೆ ಲೈಸೆನ್ಸ್, ಕೋಳಿ ಅಂಗಡಿ ನಡೆಸೋದಕ್ಕೆ ಲೈಸೆನ್ಸ್ ಫೀ ಕುರಿತ ಮಾಹಿತಿ ನೀಡಲಾಗಿದೆ. ಆದರೇ ಈ ಮಳಿಗೆಗಳ ಅವಧಿ ದಿನಾಂಕ 01-04-2026ರವರೆಗೆ ಇದೆ.
ಇನ್ನೂ ದಿನಾಂಕ 22-03-2026 ಬಾರದೇ ಇದ್ದರೂ ಆ ದಿನಾಂಕದಲ್ಲಿ ಪ್ರಕಟಿಸಿದಂತ ಪಾಪ್ಲೆಟ್ಸ್ ನಲ್ಲಿ ತಾಳಗುಪ್ಪದ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆಗಳ ಎರಡು ಅಂಗಡಿಗಳ ಟೆಂಡರ್ ಗೆ ಕರೆಯಲಾಗಿದೆ. ಈ ಮಳಿಗೆಗೆಗಳನ್ನು ಈ ಹಿಂದೆ ಟೆಂಡರ್ ಹಿಡಿದು ವಾಣಿಜ್ಯ ಮಳಿಗೆಯನ್ನು ಪಡೆದಿರೋರ ಅವಧಿ ಮಾತ್ರ ದಿನಾಂಕ 01-04-2026ಕ್ಕೆ ಮುಕ್ತಾಯವಾಗಲಿದೆ.

ತಾಳಗುಪ್ಪ ಗ್ರಾಮ ಪಂಚಾಯ್ತಿ ಸದಸ್ಯರ ಅವಧಿ ಮುಕ್ತಾಯಕ್ಕೆ ಮುನ್ನಾ ಟೆಂಡರ್ ಮುಗಿಸೋದಕ್ಕೆ ತರಾತುರಿ?
ತಾಳಗುಪ್ಪ ಗ್ರಾಮ ಪಂಚಾಯ್ತಿ ಸದಸ್ಯರ ಅವಧಿ ಮುಂಬರುವಂತ ಮಾರ್ಚ್ ನಲ್ಲಿ ಅಂತ್ಯಗೊಳ್ಳಲಿದೆ. ಅದಕ್ಕೂ ಮುನ್ನಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಣಿಜ್ಯ ಮಳಿಗೆ ಸೇರಿದಂತೆ ಇತರೆ ಟೆಂಡರ್ ಗಳನ್ನು ಹರಾಜಿಗಿಟ್ಟು ತರಾತುರಿಯಲ್ಲಿ ನೀಡಲಾಗಿದೆ. ತಮ್ಮ ಅಧಿಕಾರ ಅವಧಿ ಮುಕ್ತಾಯಕ್ಕೆ ಮುನ್ನವೇ ಟೆಂಡರ್ ಮುಗಿಸೋದಕ್ಕೆ, ತಮ್ಮ ಪರಿಚಿತರಿಗೆ ಮಳಿಗೆಗಳನ್ನು ಕೊಡಿಸೋದಕ್ಕೆ ಈ ರೀತಿಯಾಗಿ ಟೆಂಡರ್ ಕರೆದು ಮುಕ್ತಾಯಗೊಳಿಸಿದಂತ ಆರೋಪ ಕೇಳಿ ಬಂದಿದೆ.
ಮೂರು ತಿಂಗಳ ಮೊದಲೇಕೆ ಟೆಂಡರ್ ಕರೆದಿದ್ದು?
ಯಾವುದೇ ವಾಣಿಜ್ಯ ಮಳಿಗೆಯ ಅವಧಿ ಮುಕ್ತಾಯವು ಒಂದು ಅಥವಾ ಎರಡು ತಿಂಗಳು ಹೊಸದಾಗಿ ಟೆಂಡರ್ ಕರೆಯುವುದು ಸರ್ವೇ ಸಾಮಾನ್ಯವಾದಂತ ಪ್ರಕ್ರಿಯೆಯಾಗಿದೆ. ಆದರೇ ತಾಳಗುಪ್ಪ ಗ್ರಾಮ ಪಂಚಾಯ್ತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಜನಪ್ರತಿನಿಧಿಗಳು, ಪಿಡಿಓ ಸಾಹೇಬ್ರು ಜೊತೆಗೂಡಿ ಮೂರು ತಿಂಗಳ ಮೊದಲೇ ಟೆಂಡರ್ ಕರೆದಿದ್ದು ಮಾತ್ರ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪಿಡಿಓ ಮೊಬೈಲ್ ಪೋನೇ ಸ್ವಿಚ್ ಆಫ್
ಸರ್ಕಾರ ನೀಡಿರುವಂತ ಮೊಬೈಲ್ ಸಂಖ್ಯೆಯನ್ನು ಕರ್ತವ್ಯ ನಿರತ ಅಧಿಕಾರಿ ತುರ್ತು ಸಂದರ್ಭ ಹೊರತಾಗಿ ಸ್ವಿಚ್ ಆಫ್ ಮಾಡುವಂತಿಲ್ಲ. ಆದರೇ ತಾಳಗುಪ್ಪ ಗ್ರಾಮ ಪಂಚಾಯ್ತಿ ಪಿಡಿಓ ಸಾಹೇಬ್ರು ಮಾತ್ರ ಕೆಲ ದಿನಗಳಿಂದ ಸ್ವಿಚ್ ಆಫ್ ಮಾಡಿದ್ದಾರೆ ಎನ್ನಲಾಗಿದೆ. ಇಂದು ಕೂಡ ನಿಮ್ಮ ಕನ್ನಡ ನ್ಯೂಸ್ ನೌ ಪಿಡಿಓ ಸಂಪರ್ಕಿಸಿ ಮಾಹಿತಿ ಪಡೆಯೋದಕ್ಕೆ ಕರೆ ಮಾಡಿದ್ರೇ ಸರ್ಕಾರಿ ನಂಬರ್ ಹಾಗೂ ಅವರ ಖಾಸಗಿ ನಂಬರ್ ಗಳೆರಡೂ ಸ್ವಿಚ್ ಆಫ್ ಆಗಿದ್ದು ಗಮನಕ್ಕೆ ಬಂದಿದೆ.

ಪ್ರಚಾರವೇ ಇಲ್ಲದೇ ಟೆಂಡರ್ ಮುಕ್ತಾಯ
ರಾಜ್ಯ ಸರ್ಕಾರದ ನಿಯಮಾನುಸಾರ ಸರ್ಕಾರಿ ಮಳಿಗೆ ಮಾರಾಟ ಸೇರಿದಂತೆ ಇತರೆ ಯಾವುದೇ ಮಾಹಿತಿಯನ್ನು ಸ್ಥಳೀಯ ಪತ್ರಿಕೆ ಇಲ್ಲವೇ ರಾಷ್ಟ್ರ ಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡಿ ಪ್ರಚುರಗೊಳಿಸಬೇಕು. ಆ ಮೂಲಕ ಪೈಪೋಟಿ ಹುಟ್ಟು ಹಾಕಿ ಟೆಂಡರ್ ವೇಳೆಯಲ್ಲಿ ಅತಿ ಹೆಚ್ಚು ಬಿಡ್ ಗಳಿಗೆ ಮಾರಾಟ ಮಾಡುವಂತ ಕ್ರಮವಾಗಬೇಕು. ಆದರೇ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳಿಗೆ ಸೇರಿದಂತೆ ಇತರೆ ಟೆಂಡರ್ ಗಳ ಬಗ್ಗೆ ಯಾವುದೇ ಪ್ರಚಾರವನ್ನೇ ನೀಡಿಲ್ಲ ಎನ್ನಲಾಗುತ್ತಿದೆ.
ಒಂದಷ್ಟು ಪಾಪ್ಲೆಟ್ಸ್ ಮಾಡಿಸಿ ಕೆಲವೆಡೆ ಹಂಚಿದ್ದಾರೆಯೇ ಹೊರತು ಪತ್ರಿಕೆಗಳ ಜಾಹೀರಾತಾಗಲೀ, ಬೇರೆಯ ಮಾಧ್ಯಮಗಳಲ್ಲಿ ಪ್ರಚಾರವನ್ನೇ ನೀಡದೇ ಸದ್ದಿಲ್ಲದೇ ಇಂದು ಟೆಂಡರ್ ಪೂರ್ಣಗೊಳಿಸಲಾಗಿದೆ. ಹೆಚ್ಚು ಪ್ರಚಾರವು ತಾಳಗುಪ್ಪ ಗ್ರಾಮ ಪಂಚಾಯ್ತಿ ಮಳಿಗೆಗಳ ಟೆಂಡರ್ ಬಗ್ಗೆ ಆಗಿದ್ದರೇ 7,51,000 ರೂಪಾಯಿ ಅಲ್ಲ, ಇನ್ನೂ ಹೆಚ್ಚಿನ ಬಿಡ್ ಗೆ ಪೈಪೋಟಿ ನಡೆದು, ಮತ್ತಷ್ಟು ಆದಾಯ ಹರಿದು ಬರುತ್ತಿತ್ತು ಎಂಬುದು ಹಲವರ ಮಾತಾಗಿದೆ.
ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಲು ಸಾರ್ವಜನಿಕರ ಆಗ್ರಹ
ಇಂದು ನಡೆದಂತ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾಣಿಜ್ಯ ಮಳಿಗೆ ಸೇರಿದಂತೆ ಇತರೆ ಟೆಂಡರ್ ಪ್ರಕ್ರಿಯೆ ಕಾನೂನಾತ್ಮಕವಾಗಿ ನಡೆದಿಲ್ಲ. ಇದರಲ್ಲಿ ಹಲವಾರು ಗೋಲ್ಮಾನ್ ನಡೆದಿರುವಂತ ಶಂಕೆಗಳಿವೆ. ಟೆಂಡರ್ ಪ್ರಕ್ರಿಯೆಯನ್ನು ಸದಸ್ಯರ ಕಾಲಾವಧಿಯ ಕೊನೆಯಲ್ಲಿ ನಡೆಸಿದ್ದು ಸರಿಯಲ್ಲ. ಪ್ರಚಾರ ನೀಡದೇ ಟೆಂಡರ್ ಕರೆದು ಮುಕ್ತಾಯಗೊಳಿಸಿರೋದರಿಂದ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಆದಾಯ ಕೈತಪ್ಪಿದಂತೆ ಆಗಿದೆ. ಈ ಎಲ್ಲದರ ಹಿನ್ನಲೆಯಲ್ಲಿ ಸಂಬಂಧ ಪಟ್ಟಂತ ಅಧಿಕಾರಿಗಳು ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸುವಂತೆ ತಾಳಗುಪ್ಪ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆ ನಿಟ್ಟಿನಲ್ಲಿ ಸಾಗರ ತಾಲ್ಲೂಕು ಆಡಳಿತ, ಶಿವಮೊಗ್ಗ ಜಿಲ್ಲಾಡಳಿತ ಕ್ರಮವಹಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು
Watch Video: ರೋಡಲ್ಲಿ ಅಲ್ಲ, ‘ಲಿಫ್ಟ್’ನಲ್ಲಿದ್ದ ಮಹಿಳೆಯ ಸರವನ್ನೇ ಕಿತ್ತುಕೊಂಡು ಓಡಿದ ಕಳ್ಳ: ವೀಡಿಯೋ ವೈರಲ್
BREAKING: ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ಶಾಕ್: ಕೊಲೆ ಕೇಸಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ








